LATEST NEWS
ಕಂಬಳ ಕುರಿತಾದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು
ಕಂಬಳ ಕುರಿತಾದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು
ಮಂಗಳೂರು ಅಕ್ಟೋಬರ್ 8: ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿ ಪ್ರಶ್ನಿಸಿ ಪೇಟಾ ದವರು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿರಾಕರಿಸಿದ್ದಾರೆ.
ಕಂಬಳ ಕ್ರೀಡೆಗೆ ಅನುಮತಿ ನೀಡಿ ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದು ಕಂಬಳ ಕ್ರೀಡೆಯ ಆಚರಣೆಗ ಇದ್ದ ತೊಡಕನ್ನು ನಿವಾರಿಸಿತ್ತು. ಕರ್ನಾಟಕ ಸರ್ಕಾರದ ಹೊಸ ಕಾನೂನು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ 1960 ಕಾಯ್ದೆಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ. ಇದು ಪ್ರಾಣಿಗಳ ಹಕ್ಕಿನ ಉಲ್ಲಂಘನೆ ಮತ್ತು ಸಾಂವಿಧಾನಿಕ ವಿರೋಧಿ ಎಂದು ಆರೋಪಿಸಿ ಮರು ಅರ್ಜಿ ಸಲ್ಲಿಸಿದೆ.
ಈ ಹಿನ್ನಲೆಯಲ್ಲಿ ಪ್ರಾಣಿ ದಯಾ ಸಂಘ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕುರಿಯನ್ ಜೋಸೆಫ್ ಹಾಗೂ ನ್ಯಾ. ಅಬ್ದುಲ್ ನಜೀರ್ ಪೀಠ ಬೇರೊಂದು ಪೀಠ ಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.
ಈ ಹಿಂದೆ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಲು ನ್ಯಾ. ಅಬ್ದುಲ್ ನಜೀರ್ ನಿರಾಕರಿಸಿದ್ದಾರೆ. ಕಂಬಳ ವಿಚಾರದ ಬಗ್ಗೆ ನಾನು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ್ದೇನೆ.
ಕಂಬಳ ಆಚರಣೆಗೆ ಅನುಮತಿ ನೀಡಿದ್ದೆ. ಪ್ರಾಣಿ ದಯಾ ಸಂಘದ ಬೇಡಿಕೆಗೆ ವಿರುದ್ಧವಾದ ತೀರ್ಪು ನೀಡಿದ್ದೆ. ಹೀಗಾಗಿ ಇಲ್ಲಿ ನಾನು ಅರ್ಜಿ ವಿಚಾರಣೆ ನಡೆಸಲಾರೆ. ಬೇರೆ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯಲಿ ಎಂದು ನ್ಯಾ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು. ನ್ಯಾ. ಅಬ್ದುಲ್ ನಜೀರ್ ಮಾತಿಗೆ ದನಿಗೂಡಿಸಿದ ನ್ಯಾ ಕುರಿಯನ್ ಜೋಸೆಫ್ ಬದಲಿ ಪೀಠಕ್ಕೆ ಪ್ರಕರಣವನ್ನು ಅರ್ಜಿ ವರ್ಗಾಯಿಸಿದರು.