LATEST NEWS
ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿದ ಕಂಬಳ ಗದ್ದೆಯ ಚಿರತೆ ಶ್ರೀನಿವಾಸ ಗೌಡ…!

ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿದ ಕಂಬಳ ಗದ್ದೆಯ ಚಿರತೆ ಶ್ರೀನಿವಾಸ ಗೌಡ…!
ಮಂಗಳೂರು: ವಿಶ್ವದ ಅತ್ಯಂತ ವೇಗದ ಓಟಗಾರನಾಗಿರುವ ಉಸೇನ್ ಬೋಲ್ಟ್ ದಾಖಲೆಯನ್ನು ಕರಾವಳಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಮುರಿದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್ ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.
ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ.

ಅಲ್ಲದೆ ಮೂಡಬಿದಿರೆ ಕಂಬಳದಲ್ಲಿ ಅತ್ಯಂತ ವೇಗವಾಗಿ ಓಡಿರುವ ಶ್ರೀನಿವಾಸ ಗೌಡ 30 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. 142.50 ಮೀಟರ್ ಉದ್ದದ ಕಂಬಳದ ಕೆಸರು ಗದ್ದೆಯ ಗುರಿಯನ್ನು ಕೇವಲ 13.62 ಸೆಕೆಂಡ್ ಗಳಲ್ಲಿ ತಲುಪಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಶ್ರೀನಿವಾಸ್ ಗೌಡ (28). ಈ ಹಿಂದೆ 1990 ರಲ್ಲಿ ಬೆಳ್ತಂಗಡಿಯಲ್ಲಿ ಅತ್ಯಂತ ವೇಗವಾಗಿ ಓಡಿದ್ದ ದಾಖಲೆ ನಿರ್ಮಾಣವಾಗಿತ್ತು.
ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.
ಶ್ರೀನಿವಾಸ್ ಗೌಡ ಈ ವರೆಗೂ 12 ಕಂಬಳಗಳಲ್ಲಿ ಭಾಗವಹಿಸಿದ್ದು 29 ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಐಕಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ವಿಭಾಗಗಳಲ್ಲೂ ಬಹುಮಾನ ಗೆಲ್ಲುವ ಮೂಲಕ ಮತ್ತೊಂದು ದಾಖಲೆಯನ್ನೂ ನಿರ್ಮಿಸಿರುವ ಕೀರ್ತಿ ಶ್ರೀನಿವಾಸ್ ಗೌಡ ಅವರಿಗೆ ಸಲ್ಲುತ್ತದೆ.
ಶಾಲಾ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಬಿಟ್ಟ ಶ್ರೀನಿವಾಸ್ ಗೌಡ, ತಮ್ಮ ಬಾಲ್ಯದಿಂದ ಕಂಬಳದತ್ತ ಆಕರ್ಷಿತರಾಗಿದ್ದರು. ಸದೃಢ ಮೈಕಟ್ಟು, ಜಿಮ್‍ಗೆ ಹೋಗದೆ ಬೆಳೆದ ನ್ಯಾಚುರಲ್ ಸಿಕ್ಸ್ ಪ್ಯಾಕ್, ಕಂಬಳದ ಗದ್ದೆಗೆ ಇಳಿದರೆ ಸಾಕು ಚಿರತೆಯನ್ನೇ ನಾಚಿಸುವಂತಹ ವೇಗದಲ್ಲಿ ಓಡುವ ಶ್ರೀನಿವಾಸ ಗೌಡ ಈಗ ಕರಾವಳಿಯಲ್ಲಿ ಸಖತ್ ಫೆಮಸ್ ಆಗಿಬಿಟ್ಟಿದ್ದಾರೆ.
ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಇವರು ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.