LATEST NEWS
ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು – ದೇವಿಗೆ ನೈಸರ್ಗಿಕ ಪುಣ್ಯಸ್ನಾನ
ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು – ದೇವಿಗೆ ನೈಸರ್ಗಿಕ ಪುಣ್ಯಸ್ನಾನ
ಉಡುಪಿ ಅಗಸ್ಟ್ 14: ಉಡುಪಿ ಜಿಲ್ಲೆಯಲ್ಲಿ ರಾತ್ರಿ ಇಡೀ ಭಾರಿ ಮಳೆ ಸುರಿದಿದ್ದು, ಇಂದು ಬೆಳಿಗ್ಗೆಯಿಂದ ಮತ್ತೆ ಮಳೆ ಪ್ರಾರಂಭವಾಗಿದೆ. ಮೈದುಂಬಿ ಹರಿಯುತ್ತಿರುವ ಕುಬ್ಜಾ ನದಿಯಿಂದ ಪ್ರಸಿದ್ದ ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಿಗೆ ನೈಸರ್ಗಿಕ ಪುಣ್ಯಸ್ನಾನ ನೆರವೇರಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ನೆರೆ ಭೀತಿ ಉಂಟಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಹರಿಯುವ ಕುಬ್ಜಾ ನದಿ ಮೈದುಂಬಿ ಹರಿಯುತ್ತಿದ್ದು, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ನದಿ ನೀರು ಬಂದಿದೆ.
ಆಷಾಢ ಅಥವಾ ಶ್ರಾವಣ ಮಾಸದ ಮಳೆಯಲ್ಲಿ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಪುಣ್ಯಸ್ನಾನ ಆಗುವುದು ವಾಡಿಕೆ. ಈ ದೇವಾಲಯದ ಪಕ್ಕದಲ್ಲೇ ಹರಿಯುವ ಕುಬ್ಜಾ ನದಿನೀರು ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ, ತಾಯಿಗೆ ಅಭಿಷೇಕ ಮಾಡಿ, ಮತ್ತೆ ಇಳಿಮುಖವಾಗುತ್ತದೆ.
ಈ ಬಾರಿಯ ವಾಡಿಕೆಯಂತೆ ಗರ್ಭಗುಡಿಗೆ ನದಿ ನೀರು ಬಂದಿದ್ದು, ಜಲಾವೃತ ಆಗುತ್ತಿದ್ದಂತೆ ದೇವಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ವರ್ಷಕ್ಕೊಮ್ಮೆ ದೇವಿಗೆ ನೈಸರ್ಗಿಕ ಅಭಿಷೇಕಕ್ಕೆ ನೀರು ಬಂದ ಹಿನ್ನಲೆ ಭಕ್ತರು ಪುಳಕಗೊಂಡಿದ್ದು, ನದಿನೀರು ಗರ್ಭಗುಡಿ ಪ್ರವೇಶಿಸುತ್ತಿದ್ದಂತೇ ವಿಶೇಷ ಮಂಗಳಾರತಿ ನಡೆಯುತ್ತದೆ. ಇದಾದ ನಂತರ ಈ ನದಿ ನೀರಿನಲ್ಲಿ ಭಕ್ತರು ಪುಣ್ಯಸ್ನಾನ ಮಾಡುತ್ತಾರೆ. ಗಮನಿಸಬೇಕಾದ ಅಂಶವೇನಂದರೆ, ಗರ್ಭಗುಡಿ ಪ್ರವೇಶಿಸುವ ನದಿನೀರು ಎಂದೂ ತಾಯಿಯ ಪಾದದ ಮೇಲೆ ಆವೃತವಾಗದೇ ಇರುವುದು ಇಲ್ಲಿನ ವಿಶೇಷ.