DAKSHINA KANNADA
ಸಾಲಬಾಧೆಯೇ ನನ್ನ ಸಾವಿಗೆ ಕಾರಣ -ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್

ಪುತ್ತೂರು ಎಪ್ರಿಲ್ 01: ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಯುವಕ ಮನೆಯಲ್ಲಿ ಸೋಮವಾರ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋಹನ್ ಅವರು ಎರಡು ವಾರಗಳಿಂದ ಹೋಟೆಲ್ ವ್ಯವಹಾರ ಸ್ಥಗಿತಗೊಳಿಸಿದ್ದರು. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ನೆರೆಯ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ಮನೆಯವರು ಸಂಜೆ ವಾಪಸಾದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಮೋಹನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ಸಾಲಬಾಧೆಯೇ ನನ್ನ ಸಾವಿಗೆ ಕಾರಣ’ ಎಂದು ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ಪತ್ನಿ ನೀಡಿದ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರಿಗೆ ತಾಯಿ, ಪತ್ನಿ, 4 ವರ್ಷದ ಪುತ್ರಿ ಇದ್ದಾರೆ.