BANTWAL
ಬಿಸಿಯೂಟಕ್ಕಾಗಿ ರಾಜ್ಯ ಸರಕಾರಕ್ಕೆ ಮುಂದೆ ಮನವಿ ಸಲ್ಲಿಸಿದ ಕಲ್ಲಡ್ಕ ಪ್ರಭಾಕರ್ ಭಟ್

ಬಿಸಿಯೂಟಕ್ಕಾಗಿ ರಾಜ್ಯ ಸರಕಾರಕ್ಕೆ ಮುಂದೆ ಮನವಿ ಸಲ್ಲಿಸಿದ ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು ಜೂನ್ 01: ಯಾವುದೇ ಕಾರಣಕ್ಕೂ ಬಿಸಿಯೂಟಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಈಗ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ಶಾಲೆಗಳಿಗೆ ಬಿಸಿಯೂಟ ನೀಡಿ ಎಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಬಂಟ್ವಾಳದಲ್ಲಿ ಭಾರಿ ಸುದ್ದಿ ಮಾಡಿದ್ದ ಕಲ್ಲಡ್ಕ ಶಾಲೆಗಳ ಬಿಸಿಯೂಟ ಪ್ರಕರಣ ಈಗ ಮತ್ತೆ ಸುದ್ದಿಯಾಗುತ್ತಿದೆ. ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುತ್ತಿದ್ದ ಹಣದ ರೂಪದ ಅನುದಾನಕ್ಕೆ ಈ ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಬಿ. ರಮಾನಾಥ ರೈ ತಡೆ ಒಡ್ಡಿದ್ದರು . ಬದಲಿಗೆ ಬಿಸಿಯೂಟ ನೀಡುವ ಪ್ರಸ್ತಾಪ ಇಟ್ಟಿದ್ದರು. ಆದರೆ, ಶಾಲಾಡಳಿತ ಮಂಡಳಿ ಬಿಸಿಯೂಟದ ಪ್ರಸ್ತಾಪ ತಿರಸ್ಕರಿಸಿ ಸಾವೀರಾರು ಶಾಲಾ ಮಕ್ಕಳು ರಸ್ತೆಗಿಳಿದು ಸಚಿವ ರಮಾನಾಥ ರೈ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು.

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಗಳ ಅನ್ನ ಕಸಿದ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಭಿಕ್ಷಾಂದೇಹಿ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಸಾವಿರಾರು ಜನರು ಸ್ಪಂದಿಸುವ ಮೂಲಕ ಲಕ್ಷಾಂತರ ರೂಪಾಯಿ ಸಂಗ್ರಹಿಸಿತ್ತು. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಕ್ಕಿ ಭಿಕ್ಷೆಯ ಮೂಲಕವೂ ಭಾರೀ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಗೊಂಡಿತ್ತು.
ಗಣಿಧನಿ ಜನಾರ್ದನ ರೆಡ್ಡಿ 25 ಲಕ್ಷ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಮಕ್ಕಳ ಊಟ ಕಸಿದ ವಿಚಾರವನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಮುಖ ಅಸ್ತ್ರವಾಗಿಸಿ ಪ್ರಯೋಗಿಸಿತ್ತು. ಮಕ್ಕಳ ಊಟ ಕಸಿದ ವಿಚಾರ ಸಚಿವ ರಮಾನಾಥ್ ರೈ ಸೋಲಿಗೆ ಪ್ರಮುಖ ಕಾರಣ ಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.
ಶಿಕ್ಷಣ ಇಲಾಖೆ ಎರಡೂ ಶಾಲೆಗಳಿಗೂ ನೋಟೀಸ್ ನೀಡಿ ಬಿಸಿಯೂಟಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಿತ್ತು. ಆದರೆ ಯಾವುದೇ ಕಾರಣಕ್ಕೂ ಬಿಸಿಯೂಟಕ್ಕಾಗಿ ಅರ್ಜಿ ಸಲ್ಲಿಸಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೊಳ್ಳುತ್ತಿದ್ದರು. ಆದರೆ ಇದೀಗ ನೂತನ ಸಮ್ಮಿಶ್ರ ಸರ್ಕಾರಕ್ಕೆ ಈ ಎರಡೂ ಶಾಲೆಗಳೂ ಮನವಿ ಮಾಡಿದ್ದು, ಬಿಸಿಯೂಟ ನೀಡುವಂತೆ ಮನವಿ ಮಾಡಿದೆ.
ಆ ದಿನಗಳಲ್ಲಿ ಸರ್ಕಾರದ ಅನುದಾನ ಬೇಡ ಎಂದಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರೇ ಈಗ ಬಿಸಿಯೂಟ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು ವಿಶೇಷವಾಗಿದೆ.
ರಾಜ್ಯ ಸರಕಾರ ಬದಲಾಗುತ್ತಿದ್ದಂತೆ ಅದೇ ಶಾಲಾಡಳಿತ ಮಂಡಳಿ ಬಿಸಿಯೂಟಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದೆ. ಈ ಮನವಿಗೆ ರಾಜ್ಯ ಸರಕಾರ ಒಪ್ಪಿಗೆಯನ್ನೂ ಸೂಚಿಸಿದೆ. ಈ ಹಿನ್ನಲೆಯಲ್ಲಿ ಎರಡೂ ಶಾಲೆಗಳಿಗೆ ಬಿಸಿಯೂಟದ ಅಕ್ಕಿಯೂ ಪೂರೈಕೆಯಾಗಿದೆ.
ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ದ ತೊಡೆತಟ್ಟಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಈಗ ಬಿಸಿಯೂಟಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದು ಈಗ ಚರ್ಚೆಗೆ ಹಾಗ ಕುತೂಹಲಕ್ಕೆ ಕಾರಣ ವಾಗಿದೆ. ಬಿಯೂಟಕ್ಕಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಏನಾಯಿತು. ಸಂಗ್ರಹಿಸಲಾದ ಅಕ್ಕಿ ಏನಾಯಿತು ಎಂಬ ಪ್ರಶ್ನೆ ಮೂಡಲಾರಂಭಿಸಿದೆ.