LATEST NEWS
ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ: ಯು.ಟಿ. ಖಾದರ್

ಮಂಗಳೂರು,ಸೆಪ್ಟೆಂಬರ್ 27: ಪ್ರವಾಸಿಗರ ತಾಣವಾಗಿರುವ ಕರಾವಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ತಿಳಿಸಿದರು.
ನಗರದ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಜಿಲ್ಲಾ ಪ್ರವಾಸೋದ್ಯಮ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ತುಳುನಾಡು ಸಂಪತ್ತು, ಸಂಸ್ಕೃತಿ, ಪರಂಪರೆ ಭರಿತವಾದ ಜಿಲ್ಲೆ. ಇಲ್ಲಿ ಸಮುದ್ರ, ದೇವಾಲಯಗಳು, ಗಿರಿಧಾಮಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ, ಇಲ್ಲಿನ ಮತ್ತಷ್ಟು ಪ್ರವಾಸಿ ತಾಣಗಳ ಬಗ್ಗೆ ಅವರಿಗೆ ಮಾಹಿತಿ ನೀಡುವ ಕೆಲಸವಾಗಬೇಕು, ತುಳುನಾಡಿನ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಮ್ಯೂಸಿಯಂ ನಿರ್ಮಾಣವಾದರೆ ಉತ್ತಮ, ಇದರಿಂದಾಗಿ ಇಲ್ಲಿನ ಸಂಸ್ಕøತಿಯನ್ನು ತಿಳಿಸಿಕೊಡಬಹುದಾಗಿದೆ ಎಂದರು. ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎನ್. ಮಾಣಿಕ್ಯ ಸ್ವಾಗತಿಸಿದರು. ಕೌಶಲ್ಯ ಅಭಿವೃದ್ಧಿ ತರಬೇತಿದಾರ ಸಂಜಯ್ ನಿರೂಪಿಸಿದರು.