KARNATAKA
ವಿಧಾನಸಭೆ ಸ್ಪೀಕರ್ – ನಾಮಪತ್ರ ಸಲ್ಲಿಸಿದ ಯು.ಟಿ ಖಾದರ್
ಬೆಂಗಳೂರು ಮೇ 23: ಕೊನೆಗೂ ಕಾಂಗ್ರೇಸ್ ಗೆ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದು, ಮಾಜಿ ಸಚಿವ ಯು.ಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದು, ಇಂದು ಅಧಿಕೃತವಾಗಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು.
ನಿನ್ನೆ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್. ವಿ ದೇಶಪಾಂಡೆ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಹಂಗಾಮಿ ಸ್ಪೀಕರ್ ವಿಶ್ರಾಂತಿ ಹೋದ ಸಂದರ್ಭದಲ್ಲಿ ಪೀಠದಲ್ಲಿ ಸೋಮವಾರ ಕೆಲ ಹೊತ್ತು ಯು.ಟಿ ಖಾದರ್ ಅವರು ಕುಳಿತುಕೊಂಡಿದ್ದರು. ಇದೀಗ ಯು.ಟಿ ಖಾದರ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ.
ಯು.ಟಿ ಖಾದರ್ ಅವರು ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು, ಮಾಜಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.