DAKSHINA KANNADA
ಕಡಬದಲ್ಲಿ ಅನ್ನ ಭಾಗ್ಯದ ಅಕ್ಕಿ ಜೊತೆ ಪಂಚಕಜ್ಜಾಯ, ಹುಣಸೆ ಬೀಜ, ಕಲ್ಲುಗಳು ಫ್ರೀ..!

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಬಿಪಿಎಲ್ ಪಡಿತರದಾರರ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜಗಳು ಫ್ರೀಯಾಗಿ ಸಿಗ್ತಿವೆ.
ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಬಿಪಿಎಲ್ ಪಡಿತರದಾರರ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜಗಳು ಫ್ರೀಯಾಗಿ ಸಿಗ್ತಿವೆ.

ಕಡಬ ತಾಲೂಕಿನ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯಲ್ಲಿ ಈ ಪದಾರ್ಥಗಳು ಕಾಣ ಸಿಕ್ಕಿದ್ದು ಉಳಿದ ಕಡೆಗಳ ಮಾಹಿತಿ ಇನಷ್ಟೇ ಸಿಗಬೇಕಿದೆ .
ಕೊಯಿಲ ಶಾಖೆಯಲ್ಲಿ ಪ್ರತೀ ತಿಂಗಳು ಹತ್ತು ತಾರೀಕಿನ ನಂತರ ಅನ್ನ ಭಾಗ್ಯ ಅಕ್ಕಿ ವಿತರಿಸಲಾಗುತ್ತಿದೆ.
ಎಂದಿನಂತೆ ಹತ್ತು ತಾರೀಕಿನ ಬಳಿಕ ಅಕ್ಕಿ ವಿತರಣೆಯಾಗುತ್ತಿತ್ತು. ವಿತರಣೆಗೆ ಕಳೆದ ಬಾರಿ ಸರಬರಾಜಾದ ಉಳಿಕೆ ಅಕ್ಕಿಯನ್ನು ಬಳಸಿದ ಬಳಿಕ, ಈ ಬಾರಿಯೂ ಈ ಶಾಖೆಗೆ ಮೀಸಲಾದ 300 ಚೀಲ ಅಕ್ಕಿ ಆಲಂಕಾರಿನಲ್ಲಿರುವ ಆಹಾರ ಇಲಾಖೆಯ ಗೋಡೌನ್ ನಿಂದ ಸರಬರಾಜು ಆಗಿದೆ.
ಈ ಪೈಕಿ ಅಕ್ಕಿ ವಿತರಣೆಗಾಗಿ 25 ಚೀಲವನ್ನು ತೆರೆಯಲಾಗಿದೆ.
ಅದರಲ್ಲಿ ನಾಲ್ಕು ಚೀಲದಲ್ಲಿ ಒಂದು ಕೆಜಿ ತೂಗುವ ಎರಡು ಸಣ್ಣ ಸಣ್ಣ ಕಲ್ಲಿನ ಪ್ಯಾಕ್, ಹುಣಸೆ ಬೀಜ, ದೇವಸ್ಥಾನಗಳಲ್ಲಿ ಕೊಡುವಂತಹ ಗೋಧಿಪುಡಿಯಂತಹ ಪಂಚಕಜ್ಜಾಯ ಪ್ರಸಾದ ಸಿಕ್ಕಿವೆ.
ಪ್ರತೀ ಬಾರಿ ಸೆಣಬು ಗೋಣಿ ಚೀಲದಲ್ಲಿ ಅಕ್ಕಿ ಪೂರೈಕೆಯಾಗುತ್ತಿದ್ದರೆ. ಈ ಬಾರಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ಸರಬರಾಜು ಮಾಡಲಾಗಿದೆ.
ಸಂಘದ ಕೊಯಿಲ ಶಾಖೆಗೆ ಮಾತ್ರ ಈಗ ಈ ತಿಂಗಳ ಅಕ್ಕಿ ಪೂರೈಕೆಯಾಗಿದ್ದು ಉಳಿದ ಕಡೆಗಳಲ್ಲಿ ಇನ್ನಷ್ಟೆ ಅಕ್ಕಿ ಪೂರೈಕೆಯಾಗಬೇಕಿದೆ.
ಕಳಪೆ ಅಕ್ಕಿಯನ್ನು ಪೂರೈಕೆ ಮಾಡಿರುವ ವಿಚಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಈ ವಿಷಯ ಗಮನಕ್ಕೆ ಬಂದಿದ್ದು, ಕಳಪೆ ಮಟ್ಟದ ಅಕ್ಕಿ ಪೂರೈಕೆ ಅಥವಾ ಅಕ್ಕಿಯಲ್ಲಿ ಕಲ್ಲು ಮಣ್ಣು ಪ್ಯಾಕೆಟ್ ಸಿಕ್ಕಿರುವ ಬಗ್ಗೆ ಈಗಾಗಲೇ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ಆಹಾರ ಪರಿವೀಕ್ಷಕರು ಹಾಗೂ ಕಂದಾಯ ನಿರೀಕ್ಷಕರನ್ನು ಪರಿಶೀಲನೆಗಾಗಿ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.