DAKSHINA KANNADA
ಕಡಬ – ಅಕಾಲಿಕ ಮಳೆಗೆ ಮೆಸ್ಕಾಂಗೆ 15 ರಿಂದ 20 ಲಕ್ಷ ನಷ್ಟ
ಕಡಬ ಎಪ್ರಿಲ್ 26: ಕಡಬದಲ್ಲಿ ನಿನ್ನೆ ಸಂಜೆ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಮೆಸ್ಕಾಂಗೆ ಅಂದಾಡು 15 ರಿಂದ 20 ಲಕ್ಷ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ನಿನ್ನೆ ಸಂಜೆ ಏಕಾಎಕಿ ಗುಡುಗು, ಗಾಳಿಯೊಂದಿಗೆ ಬಾರೀ ಮಳೆ ಸುರಿದಿದೆ. ಮಳೆಯ ಅಬ್ಬರ ಜೊತೆ ಗಾಳಿ ಸೇರಿಕೊಂಡು ಅಪಾರ ಹಾನಿ ಮಾಡಿದ್ದು. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ಮರ ಮುರಿದು ಬಿದ್ದು, ಬಸ್ ತಂಗುದಾಣ, 63kva ವಿದ್ಯುತ್ ಪರಿವರ್ತಕ ಸೇರಿದಂತೆ ಹಲವಾರು ವಿದ್ಯುತ್ ಕಂಬಗಳು, ತಂತಿಗಳು ಧರಶಾಹಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಸಂಚಾರವು ಸುಮಾರು ಒಂದು ಗಂಟೆಗಳ ಕಾಲ ಬಂದ್ ಆಗಿತ್ತು. ನಂತರದಲ್ಲಿ ಸ್ಥಳೀಯರು ಸೇರಿ ಬಿದ್ದ ಮರಗಳನ್ನು ತೆರವುಗೊಳಿಸಿದರು. ಉದನೆ ಸಮೀಪದ ಕಳಪ್ಪಾರು ಮತ್ತು ಶೆರ್ವತಡ್ಕ ಎಂಬಲ್ಲೂ ವಿದ್ಯುತ್ ಕಂಬಗಳು ತಂತಿಗಳು ನೆಳಕ್ಕುರುಳಿವೆ. ಕಡಬ, ಅಲಂಕಾರು, ನೆಲ್ಯಾಡಿ, ಬಿಳಿನೆಲೆ ಮೆಸ್ಕಾಂ ವ್ಯಾಪ್ತಿಯಲ್ಲಿ ಅಂದಾಜು 15 ರಿಂದ 20 ಲಕ್ಷ ರೂಪಾಯಿಗಳ ನಷ್ಟ ಆಗಿರಬಹುದೆಂದು ಕಡಬ ಮೆಸ್ಕಾಂ ಎಇಟಿ ಸಜಿಕುಮಾರ್ ಮಾಹಿತಿ ನೀಡಿದ್ದಾರೆ. ಕಂಬಗಳು, ವಿದ್ಯುತ್ ಪರಿವರ್ತಕ, ತಂತಿಗಳು ಮುರಿದು ಬಿದ್ದ ಕಡೆಗಳಲ್ಲಿ ಮೆಸ್ಕಾಂ ಸಿಬ್ಬಂದಿಗಳು ತುರ್ತು ಕೆಲಸಗಳಲ್ಲಿ ನಿರತರಾಗಿದ್ದಾರೆ ಮತ್ತು ನಾಳೆ ಸಂಜೆಯೊಳಗೆ ವಿದ್ಯುತ್ ವ್ಯತ್ಯಯಗೊಂಡಿರುವ ಕಡೆಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಲಾಗುವುದೆಂದು ತಿಳಿಸಿದ್ದಾರೆ.