LATEST NEWS
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು – 5 ಸಾವು

ಅಪ್ಘಾನಿಸ್ತಾನ ಅಗಸ್ಟ್ 16: ಇಡೀ ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ, ಶ್ರೀಮಂತ ಅಪ್ಘನ್ ರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಅಗಮಿಸಿದ್ದು, ಇಡೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜನ ಸಾಗರದಿಂದ ತುಂಬಿತುಳುಕುತ್ತಿದ್ದು, ರೈಲುಗಳಲ್ಲಿ ಹತ್ತುವಂತೆ ವಿಮಾನಗಳನ್ನು ಜನರು ಏರುತ್ತಿದ್ದಾರೆ.
ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ನಾಗರಿಕರನ್ನು ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಮೂಲಕ ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕಳುಹಿಸಲು ಆದ್ಯತೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ ಸಂಚಾರ ನಿಯಂತ್ರಣ ವ್ಯವಸ್ಥೆಯ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಲಾಗಿದೆ’ ಎಂದು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಇಲಾಖೆಗಳು ಜಂಟಿ ಹೇಳಿಕೆ ನೀಡಿವೆ.

ಝೆಕ್ ಆಂತರಿಕ ಸಚಿವ ಜಾನ್ ಹಮಾಸೆಕ್ ಟ್ವೀಟ್ ಮಾಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಇದ್ದು ಝೆಕ್ ವಿಮಾನಗಳು ಟೇಕ್ ಆಫ್ ಆಗಿದ್ದೆ ಒಂದು ಪವಾಡ ಎಂದು ಹೇಳಿದ್ದಾರೆ. ಇನ್ನು ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಐವರು ಮಂದಿ ಸಾವನ್ನಪ್ಪಿರುವ ಘಟನೆ ನಡೆಡಿದೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಏರಲು ಉಂಟಾದ ನೂಕುನುಗ್ಗಲಿನಿಂದಾಗಿ ಕನಿಷ್ಟ ಐದು ಮಂದಿ ನಾಗರಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ೫ ಮೃತ ದೇಹಗಳನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹೊತ್ತೊಯ್ದಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದೀಗ ವಿಮಾನ ನಿಲ್ದಾಣದಲ್ಲಿ ಸತ್ತವರು ಕಾಲ್ತುಳಿತಕ್ಕೆ ಸಿಕ್ಕಿ ಸತ್ತವರೇ ಅಥವಾ ಅಮೆರಿಕದ ಸೈನಿಕರ ಗುಂಡಿಗೆ ಬಲಿಯಾದರೇ ಎಂದು ಖಚಿತವಾಗಿ ತಿಳಿದುಬಂದಿಲ್ಲ.