Connect with us

DAKSHINA KANNADA

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ – ರಷ್ಯಾದಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಿದ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

ರಷ್ಯಾ ಮೇ 23: ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡಲು ರಷ್ಯಾಕ್ಕೆ ತೆರಳಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರನ್ನು ಒಳಗೊಂಡ ಸಂಸದೆ ಕನಿಮೋಳ್‌ ನೇತೃತ್ವದ ಸರ್ವಪಕ್ಷಗಳ ನಿಯೋಗವು ಇಂದು ಹಲವು ಕಡೆ ಉನ್ನತ ಮಟ್ಟದ ಸಭೆ, ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.


ರಷ್ಯಾಕ್ಕೆ ಆಗಮಿಸಿದ ಐವರು ಸಂಸದರನ್ನು ಒಳಗೊಂಡ ಈ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿಗಳು ಬರಮಾಡಿಕೊಂಡಿದ್ದರು. ನಂತರ ರಷ್ಯಾದಲ್ಲಿನ ಭಾರತದ ರಾಯಭಾರಿ ವಿನಯ್ ಕುಮಾರ್ ಅವರು ಸರ್ವಪಕ್ಷ ಸಂಸದೀಯ ನಿಯೋಗದ ಜತೆಗೆ ಭಾರತ-ರಷ್ಯಾ ಸಂಬಂಧಗಳ ವಿವಿಧ ಅಂಶಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.


ಇದಾದ ಬಳಿಕ ಸರ್ವಪಕ್ಷಗಳ ನಿಯೋಗವು ಮೊದಲು ರಷ್ಯಾದ ಫೆಡರೇಶನ್ ಕೌನ್ಸಿಲ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿ ಉಪಾಧ್ಯಕ್ಷ ಆಂಡ್ರೆ ಡೆನಿಸೋವ್ ಮತ್ತು ಇತರ ಸೆನೆಟರ್‌ಗಳೊಂದಿಗೆ ಸಭೆ ನಡೆಸುವ ಮೂಲಕ ಭಯೋತ್ಪಾದನೆ ಹಾಗೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಜತೆಗೆ, ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ಆ ಭೀಕರ ದಾಳಿ ಹಾಗೂ ಅದಕ್ಕೆ ಭಾರತವು ಪಾಕಿಸ್ತಾನಕ್ಕೆ ಯಾವ ರೀತಿ ತಿರುಗೇಟು ಕೊಟ್ಟ ಆಪರೇಷನ್‌ ಸಿಂದೂರ್‌ ಯಶಸ್ವಿನ ಬಗ್ಗೆಯೂ ತಿಳಿಸಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಸ್ಪಷ್ಟ ಸಂದೇಶ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.


ಬಳಿಕ ಇಂದು ಮಧ್ಯಾಹ್ನ ಭಾರತದ ನಿಯೋಗವು ಸ್ಟೇಟ್‌ ಡುಮಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಲಿಯೋನಿಡ್ ಸ್ಲಟ್ಸ್ಕಿ ಹಾಗೂ ಸದಸ್ಯರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಈ ಭೇಟಿಯ ನಂತರ ಸರ್ವಪಕ್ಷಗಳ ನಿಯೋಗವು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ವಿದೇಶಾಂಗ ಸಚಿವ ಆಂಡ್ರಿ ರುಡೆನ್ಕೊ ಅವರನ್ನು ಭೇಟಿ ಮಾಡಿ ಪಾಕಿಸ್ತಾನವು ಹಲವು ದಶಕಗಳಿಂದ ಯಾವ ರೀತಿ ಭಯೋತ್ಪಾದನೆಯನ್ನು ಸೃಷ್ಟಿಸಿ ಉಗ್ರರನ್ನು ಪೋಷಿಸುತ್ತಿದೆ ಎಂಬುದನ್ನು ಸವಿವರವಾಗಿ ಮನವರಿಕೆ ಮಾಡಿಕೊಟ್ಟಿದೆ. ಇದಾದ ಬಳಿಕ ಸಂಸದರ ನಿಯೋಗವು ರಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟ್ರಾಟೆಜಿಕ್‌ ಸ್ಟಡೀಸ್‌ನ ಮಿಖೈಲ್‌ ಫ್ರೆಡ್ಕೋವ್‌ ಅವರನ್ನು ಭೇಟಿ ಮಾಡಿ ಭಯೋತ್ಪಾದನೆ ವಿರುದ್ಧ ಭಾರತದ ನಿಲುವುಗಳ ಬಗ್ಗೆ ವಿಚಾರ ವಿನಿಮಯ ಮಾಡಿದೆ.

ರಷ್ಯಾದ ಮಹತ್ವದ ವೇದಿಕೆಗಳಲ್ಲಿ ಭಯೋತ್ಪಾದನೆ ಹಾಗೂ ಪಾಕಿಸ್ತಾನ ಸೃಷ್ಟಿಸುತ್ತಿರುವ ಉಗ್ರರನ್ನು ಮಟ್ಟ ಹಾಕುವ ಹೋರಾಟದಲ್ಲಿ ವಿಶ್ವ ಸಮುದಾಯಗಳು ಒಂದಾಗಬೇಕು ಎನ್ನುವ ಕೋರಿಕೆಯನ್ನು ಭಾರತವು ರಷ್ಯಾದ ಎಲ್ಲ ವೇದಿಕೆಗಳಲ್ಲಿ ಮುಂದಿಟ್ಟಿದೆ. ಇದಕ್ಕೆ ಪೂರಕವಾಗಿ ರಷ್ಯಾದ ಹಲವು ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಪರಿಣತರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಶನಿವಾರದಂದು ಸರ್ವಪಕ್ಷಗಳ ನಿಯೋಗವು ಮಾಸ್ಕೋದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಸ್ಲೊವೇನಿಯಾ ದೇಶದತ್ತ ಪ್ರಯಾಣಿಸಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *