DAKSHINA KANNADA
‘ಬಿಜೆಪಿ ಸೇರುದೋ ಬೇಡಾವೋ’.. ಪುತ್ತೂರಿನಲ್ಲಿ ಇಂದು ಪುತ್ತಿಲ ಪರಿವಾರದಿಂದ ಮಹತ್ವದ ಸಭೆ..!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬಿಜೆಪಿಗೆ ಸೇರ್ಪಡೆಗೊಳ್ಳುವ ಪುತ್ತಿಲ ಪರಿವಾರದ ಮಹತ್ವದ ಸಭೆ ಇಂದು ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ನಡೆಯಲಿದೆ.
ಇದರಲ್ಲಿ ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆಗೊಳ್ಳಬೇಕೋ ಅಥವಾ ಬೇಡಾವೋ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿರುವ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಪುತ್ತಿಲ ಪರಿವಾರದ ಹಲವು ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ ಇದರ ಜೊತೆಗೆ ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಕೂಡ ಪಡೆಯಲಿದ್ದಾರೆ. ಬಿಜೆಪಿ ಸೇರುವುದೋ, ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರುವುದಕ್ಕೆ ಈಗಾಗಲೇ ಹಲವು ಷರತ್ತುಗಳನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ಮುಖಂಡರುಗಳು ವಿಧಿಸಿದ್ದಾರೆ. ಅದೇ ರೀತಿ ಪುತ್ತಿಲ ಪರಿವಾರದಿಂದಲೂ ಅರುಣ್ ಕುಮಾರ್ ಪುತ್ತಿಲರಿಗೆ ಪುತ್ತೂರು ಮಂಡಲ ಸಮಿತಿ ಜವಾಬ್ದಾರಿ ನೀಡುವ ಪ್ರಮುಖ ಬೇಡಿಕೆಯ ಷರತ್ತುಗಳು ಬಂದಿವೆ. ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕು ಘಟಕಗಳಿಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಿರುವ ದ.ಕ ಜಿಲ್ಲಾ ಬಿಜೆಪಿ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸ್ಥಾನ ಖಾಲಿ ಇಟ್ಟಿದೆ. ಪುತ್ತಿಲ ಪರಿವಾರದ ಇಂದಿನ ಸಭೆಯ ಬಳಿಕ ಪುತ್ತೂರು ಘಟಕದ ಅಧ್ಯಕ್ಷರ ಆಯ್ಕೆ ಬಗ್ಗೆ ಬಿಜೆಪಿ ಅಂತಿಮ ನಿರ್ಧಾರಕೈಗೊಳ್ಳಲಿದೆ ಎನ್ನಲಾಗಿದೆ.
