Connect with us

LATEST NEWS

ಹೈದರಾಬಾದ್ – ರೋಡ್ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿದ ಯುವತಿ – ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಹೈದರಾಬಾದ್ ಜೂನ್ 26: ಯುವತಿಯೊಬ್ಬಳು ರೋಡ್ ಬಿಟ್ಟು ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿದ ಘಟನೆ ಗುರುವಾರ ಬೆಳಗ್ಗೆ  ತೆಲಂಗಾಣದ ಕೊಂಡಕಲ್ ರೈಲ್ವೆ ಗೇಟ್ ಬಳಿ ನಡೆದಿದೆ. ಈ ಘಟನೆಯಿಂದಾಗಿ  ಹೈದರಾಬಾದ್-ಬೆಂಗಳೂರು ನಡುವಿನ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಯುವತಿ ಲಕ್ನೋ ಮೂಲದವಳು ಎಂದು ತಿಳಿದು ಬಂದಿದ್ದು, ಹೈದರಾಬಾದ್ ನಲ್ಲಿ ಐಟಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದಳು. ಇತ್ತೀಚೆಗೆ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ.  ಇಂದು ಬೆಳಿಗ್ಗೆ ಯುವತಿ ನರ್ಸಿಂಗ್ ಪೊಲೀಸ್ ಠಾಣೆಗೆ ಯಾವುದೋ ದೂರು ನೀಡಲು ಬಂದಿದ್ದಳು. ಈ ವೇಳೆ ತನ್ನ ಬ್ಯಾಗ್ ನ್ನು ಅಲ್ಲೇ ಬಿಟ್ಟು ಬಂದಿದ್ದಾಳೆ. ಪೊಲೀಸರು ಆಕೆಗಾಗಿ ಹುಡುಕಾಡುತ್ತಿದ್ದರು.

ಈ ನಡುವೆ ಯುವತಿ  ಶಂಕರ್‌ಪಲ್ಲಿಯಿಂದ ಹೈದರಾಬಾದ್ ಕಡೆಗೆ ನೇರವಾಗಿ ಹಳಿಗಳ ಮೇಲೆ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಾಳೆ. ಸುದೀರ್ಘ ಬೆನ್ನಟ್ಟಿದ ಬಳಿಕ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಯುವತಿ ಮಾಸ್ಕ್ ಹಾಕಿಕೊಂಡಿದ್ದು, ಕೈಯಲ್ಲಿ ಕಬ್ಬಿಣ ರಾಡ್ ಒಂದನ್ನು ಹಿಡಿದು ಇಳಿದಿದ್ದಾಳೆ. ಅಲ್ಲದೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಳು ಎಂದು ವರದಿಯಾಗಿದೆ.

ಸದ್ಯ ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಇದೊಂದು ಗಂಭೀರ ಭದ್ರತಾ ಲೋಪ ಎಂದು ಬಣ್ಣಿಸಿದ್ದಾರೆ. ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆ ಹೇಗೆ ರೈಲ್ವೆ ಹಳಿ ಪ್ರವೇಶಿಸಿದಳು ಮತ್ತು ಆಕೆಯ ಅಜಾಗರೂಕ ಕೃತ್ಯಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *