LATEST NEWS
ಜಾರ್ಖಂಡ್ ನಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ 18 ಅಪ್ರಾಪ್ತ ಹುಡುಗರಿಂದ ಗ್ಯಾಂಗ್ ರೇಪ್

ರಾಂಚಿ ಫೆಬ್ರವರಿ 25: ಜಾರ್ಖಂಡ್ ರಾಜ್ಯದಲ್ಲಿ ಘೋರ ದುರಂತವೊಂದು ನಡೆದಿದ್ದು, ಬುಡಕಟ್ಟು ಮೂಲದ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ 18 ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಫೆಬ್ರವರಿ 21 ರಂದು ತಡರಾತ್ರಿ ಜಾರ್ಖಂಡ್‌ನ ಖುಂಟಿ ರಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಉಲಿಹಾಟು ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಉಲಿಹತುವಿನಿಂದ ನಿಚಿತ್‌ಪುರಕ್ಕೆ ಹೋಗುವ ದಾರಿಯಲ್ಲಿ ಕರೋ ನದಿಯ ಬಳಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ಐದು ಹುಡುಗಿಯರನ್ನು ದಾರಿಯಲ್ಲಿ 18 ಅಪ್ರಾಪ್ತ ಬಾಲಕರು ತಡೆದಿದ್ದಾರೆ. ಅವರಲ್ಲಿ ಕೆಲವರು ಮೂವರು ಬಾಲಕಿಯರ ಮೇಲೆ ಒಬ್ಬೊಬ್ಬರಾಗಿ ಅತ್ಯಾಚಾರ ಎಸಗಿದ್ದಾರೆ.

ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಹುಡುಗರು, ಬಾಲಕಿಯರಿಗೆ ಬೆದರಿಕೆ ಹಾಕಿದ್ದಾರೆ. ಹೇಗೋ ಹುಡುಗಿಯರು ಶನಿವಾರ ತಮ್ಮ ಮನೆಗೆ ತಲುಪಿ ತಮ್ಮ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಕುಟುಂಬ ಸದಸ್ಯರು, ಗ್ರಾಮಸ್ಥರೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೂವರು ಬಾಲಕಿಯರು ನೀಡಿದ ಹೇಳಿಕೆ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಖುಂಟಿ ಎಸ್‌ಪಿ ಎಲ್ಲಾ 18 ಆರೋಪಿ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತ ಬಾಲಕಿಯರು ಇಬ್ಬರೂ ಒಂದೇ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.