DAKSHINA KANNADA
ಜೆರೋಸಾ ಶಾಲಾ ಪ್ರಕರಣ ಹೇಯ, ಸನಾತನ ಧರ್ಮದ ನಿಂದನೆ ಸಹಿಸಲಸಾಧ್ಯ – ಶಾಸಕ ವೇದವ್ಯಾಸ್ ಕಾಮತ್ ಎಚ್ಚರಿಕೆ..!

ಮಂಗಳೂರು : ಸನಾತನ ಧರ್ಮದ ನಿಂದನೆಯನ್ನು ಸಹಿಸಿಕೊಳ್ಳಲು ಇನ್ನು ಮೇಲೆ ಸಾಧ್ಯವಿಲ್ಲ ಧರ್ಮ ಸೂಕ್ಷ್ಮತೆಯನ್ನು ಮರೆತು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮುಗ್ಧ ವಿದ್ಯಾರ್ಥಿಗಳ ಮುಂದೆ ಅವಹೇಳನಕಾರಿಯಾಗಿ ಮಾತನಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದ ಶಿಕ್ಷಕಿಯ ನಡೆ ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ತೀವ್ರ ಸ್ವರೂಪ ಪಡೆದಿದ್ದರೂ ಮಂಗಳೂರು ಸಂತ ಜೆರೋಸಾ ಶಿಕ್ಷಣ ಸಂಸ್ಥೆ ಇಂತಹ ಶಿಕ್ಷಕಿಯನ್ನು ರಕ್ಷಿಸಲು ಯತ್ನಿಸಿದ್ದಂತೂ ಅತ್ಯಂತ ಹೇಯ ಎಂದು ಶಾಸಕ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ, ವಿದ್ಯಾರ್ಥಿಗಳ ಪೋಷಕರು, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಬಿಇಒ ಅವರು ಕೂಡಲೇ ಶಾಲೆಗೆ ಭೇಟಿ ನೀಡಬೇಕು, ತಪ್ಪಿತಸ್ಥ ಶಿಕ್ಷಕರನ್ನು ಅಮಾನತುಗೊಳಿಸಲೇಬೇಕು ಮತ್ತು ಶಾಲೆಯ ಮಾನ್ಯತೆಯನ್ನು ರದ್ದುಪಡಿಸಲು ಶಿಫಾರಸು ಮಾಡಬೇಕೆಂದು ಶಾಸಕರು ಪಟ್ಟು ಹಿಡಿದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಶಾಲೆಯ ಆಡಳಿತ ಮಂಡಳಿಯ ಮೊಂಡುವಾದಕ್ಕೆ ಹಿಡಿಶಾಪ ಹಾಕಿ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಶಾಲೆಯ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಸಂಜೆಯಾಗುತ್ತಲೇ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಸೇರಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿದ ಶಾಸಕ ಕಾಮತ್ ಅವರ ಸುತ್ತ ನಿಂತು ಜೈ ಶ್ರೀರಾಮ್ ಘೋಷಣೆ ಮೊಳಗಿಸಿ ಮಾಧ್ಯಮಗಳ ಮುಂದೆ ತಮಗಾದ ನೋವನ್ನು ಧೈರ್ಯವಾಗಿ ಹೇಳಿಕೊಂಡರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರು ಸಂಪೂರ್ಣ ಘಟನೆಯ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರ ಮನವೊಲಿಸಲು ಯತ್ನಿಸಿದರು.
ಒಂದು ಹಂತದಲ್ಲಿ ಶಾಲೆ ಆಡಳಿತ ಮಂಡಳಿ “ನಮ್ಮ ಶಿಕ್ಷಕರು ತಪ್ಪೇ ಮಾಡಿಲ್ಲ, ಆದರೂ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಲು ಮುಂದಾದಾಗ ಪ್ರತಿಭಟನೆ ಇನ್ನಷ್ಟು ಜೋರಾಗಿ “ತಪ್ಪೇ ಮಾಡಿಲ್ಲ ಎಂದಾದರೆ ಅಮಾನತು ಮಾಡುವುದು ಯಾಕೆ? ಮಾಡಿದ ತಪ್ಪನ್ನು ಒಪ್ಪಿಕೊಂಡು ತಪ್ಪಿತಸ್ಥರನ್ನು ಅಮಾನತು ಮಾಡಿ ಎಂದು ಶಾಸಕರು ಆಗ್ರಹಿಸಿದರು.
ಸನಾತನ ಧರ್ಮದ ನಿಂದನೆಯನ್ನು ಸಹಿಸಿಕೊಳ್ಳಲು ಇನ್ನು ಮೇಲೆ ಸಾಧ್ಯವೇ ಇಲ್ಲ. ಹಿಂದೂ ಸಮಾಜ ಈಗ ಜಾಗೃತವಾಗಿದೆ. ಹೇಗೆ ಯೇಸುವಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ಅವರಿಗೆ ನೋವಾಗುತ್ತದೆಯೋ ಹಾಗೆಯೇ ಹಿಂದುಗಳು ಅತ್ಯಂತ ಶ್ರದ್ದೆಯಿಂದ ಪೂಜಿಸುವ ಶ್ರೀ ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ನಮ್ಮ ಆಕ್ರೋಶದ ಕಟ್ಟೆ ಒಡೆಯುತ್ತದೆ ಎಂದರು.