LATEST NEWS
ಹೊಸ ವರ್ಷದ ಮೊದಲ ದಿನವೇ ಜಪಾನ್ ಗೆ ಆಘಾತ: 7.4 ತೀವ್ರತೆಯ ಪ್ರಬಲ ಭೂಕಂಪನ, ಸುನಾಮಿ ಎಚ್ಚರಿಕೆ
ಟೋಕಿಯೊ : ಹೊಸ ವರ್ಷದ ಮೊದಲ ದಿನವೇ ಜಪಾನ್ ಗೆ ಪ್ರಕೃತಿ ಆಘಾತ ನೀಡಿದ್ದು, ಈಶಾನ್ಯ ಜಪಾನ್ ನಲ್ಲಿ ಪ್ರಬಲ ಭೂ ಕಂಪನ ಸಂಭವಿಸಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನ ಸಂಭವಿಸಿದ್ದು, ಜಪಾನ್ ನ ಈಶಾನ್ಯ ಭಾಗದ ನನಾವೋ ನಲ್ಲಿ ಭೂ ಕಂಪನದ ಕೇಂದ್ರ ಬಿಂದು ವರದಿಯಾಗಿದೆ. ಜಪಾನ್ ನ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ಪ್ರಾಂತ್ಯದಲ್ಲಿ ಬರುವ ನಿಗಟಾ, ಟೊಯಾಮಾ ನಗರಗಳಲ್ಲಿ ಪ್ರಬಲ ಸುನಾಮಿ ಉಂಟಾಗಬಹುದು ಎಂದು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಜಪಾನ್ ರಾಜಧಾನಿ ಟೋಕಿಯೋ ನಗರ ಒಳಗೊಂಡಂತೆ ದೇಶಾದ್ಯಂತ ಭೂಕಂಪದ ಅನುಭವ ಆಗಿದೆ ಎಂದು ದಿ ಜಪಾನ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಂಪ ಸಂಭವಿಸಿದ ಕೂಡಲೇ ಸಾಗರ ತೀರದ ಜನರಿಗೆ ತುರ್ತು ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದ್ದು, ಈ ಕೂಡಲೇ ಸಮುದ್ರ ತೀರದಿಂದ ದೂರ ಉಳಿಯಿರಿ ಎಂದು ಸರ್ಕಾರ ಎಚ್ಚರಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಕರಾವಳಿ ತೀರ ಪ್ರದೇಶಗಳಿಗೆ ಹೆಚ್ಚಿನ ಸಿಬ್ಬಂದಿ ರವಾನೆ ಮಾಡಲಾಗಿದೆ.
ಇನ್ನು ಜಪಾನ್‌ನ ವಜಿಮಾ ನಗರದ ಕರಾವಳಿ ತೀರ ಪ್ರದೇಶದಲ್ಲಿ 1 ಮೀಟರ್ ಎತ್ತರಕ್ಕೆ ಸಮುದ್ರದ ಅಲೆ ಏಳಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆದ್ರೆ ಈವರೆಗೆ ಜೀವ ಹಾನಿ ಸೇರಿದಂತೆ ಯಾವುದೇ ದುರಂತದ ಮಾಹಿತಿ ಸಿಕ್ಕಿಲ್ಲ.