PUTTUR
ಜಗದೀಶ್ ಕಾರಂತ ಅವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ

ಜಗದೀಶ್ ಕಾರಂತ ಅವರಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ
ಪುತ್ತೂರು ಸೆಪ್ಟೆಂಬರ್ 30:- ಪುತ್ತೂರು ಸಂಪ್ಯ ಎಸ್.ಐ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಇತರ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ಪುತ್ತೂರು ನ್ಯಾಯಾಲಯವು ಮದ್ಯಂತರ ಜಾಮೀನು ನೀಡಿದೆ. ಈ ಹಿನ್ನಲೆಯಲ್ಲಿ ಜಗದೀಶ್ ಕಾರಂತ ದೇವಸ್ಥಾನಗಳಿಗೆ ಭೇಟಿ ನೀಡಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಜಗದೀಶ್ ಕಾರಂತ ಅವರು ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿದರು.
ಸೆಪ್ಟೆಂಬರ್15 ರಂದು ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಸಂಪ್ಯ ಠಾಣೆಯ ಎಸ್.ಐ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರು. ಈ ಸಂಬಂಧ ಪುತ್ತೂರು ನಗರ ಪೋಲೀಸರು ಕಾರಂತ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

ಈ ಹಿನ್ನಲೆಯಲ್ಲಿ ಕಾರಂತರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ದಕ್ಷಿಣಕನ್ನಡ ಜಿಲ್ಲಾ ಅಪರಾಧ ಪತ್ತೆ ದಳದ ಪೋಲೀಸರು ಅವರನ್ನು ಪುತ್ತೂರು ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದರು. ಪುತ್ತೂರು ನ್ಯಾಯಾಧೀಶರ ಮುಂದೆ ರಾತ್ರಿ 1.30 ರ ಸುಮಾರಿಗೆ ಪುತ್ತೂರು ಪೋಲೀಸರು ಜಗದೀಶ್ ಕಾರಂತರನ್ನು ಹಾಜರುಪಡಿಸಿದರು. ಜಗದೀಶ್ ಕಾರಂತರ ಪರ ವಕೀಲರಾದ ಮಹೇಶ್ ಕಜೆ ಬಂಧನದ ಮೊದಲು ಮಾಡಬೇಕಾಗಿದ್ದ ಕಾನೂನು ಪ್ರಕ್ರಿಯೆಗಳನ್ನು ಪೂರೈಸದ ಹಿನ್ನಲೆಯಲ್ಲಿ ಜಾಮೀನು ನೀಡಬೇಕೆಂದು ನ್ಯಾಯಾಧೀಶರನ್ನು ಕೋರಿದ್ದರು. ವಕೀಲರ ವಾದನವನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಗದೀಶ್ ಕಾರಂತ ಅವರಿಗೆ ಮದ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.