DAKSHINA KANNADA
‘ಬಿಜೆಪಿಗರು ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ’ ; ಬಿ ರಮಾನಾಥ ರೈ
ಮಂಗಳೂರು: ಸಂವಿಧಾನದ ಬದಲಾವಣೆ ದೇಶಕ್ಕೆ ಅಪಾಯ. ಬಿಜೆಪಿಗರು ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಅವರು ಮಾತನಾಡುತ್ತಿದ್ದರು.
ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗೆ ಅನುಕೂಲವಾಗುವ ರೀತಿ ಸಂವಿಧಾನದ ರಚನೆ ಮಾಡುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹತ್ವದ ಪಾತ್ರವಹಿಸಿದ್ದಾರೆ. ಅವರು ಶೋಷಿತ ಸಮಾಜದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ದಲಿತರ ಹಕ್ಕುಗಳಿಗಾಗಿ ಹೋರಾಡಿದರು ಎಂದು ಸ್ಮರಿಸಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಕಡೆಗಣಿಸಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ನೂರು ಭಾರಿ ಹೇಳಿದ ಸುಳ್ಳನ್ನು ಜನರು ನಂಬುತ್ತಿದ್ದಾರೆ. ಇಂದು ಸಂವಿಧಾನದ ರಕ್ಷಣೆಗೆ ಹೋರಾಟ ನಡೆಸಬೇಕಾದ ಅನಿವಾರ್ಯ ಎದುರಾಗಿವುದು ದುರಂತ. ಮತೀಯವಾದಿ ಆಡಳಿತ ರೂಢ ಬಿಜೆಪಿ ಪಕ್ಷ ಅಧಿಕಾರ ಪಡೆದು ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಅನ್ಯಾಯ ಮಾಡುತ್ತಿದೆ ಎಂದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಸಂವಿಧಾನ ನಮಗೆ ರಕ್ಷಣೆಯಾಗಿ ನಿಂತಿದೆ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದ್ದು, ಇದಕ್ಕೆ ರಾಹುಲ್ ಗಾಂಧಿ ಅವರು ನಾಯಕತ್ವ ನೀಡುತ್ತಿದ್ದಾರೆ. ಸಂವಿಧಾನದ ರಕ್ಷಣೆ ಮಾಡುವ ಹೊಣೆಗಾರಿಗೆ ದೇಶದ ಜನರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭ ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರವೂಫ್, ಟಿ.ಹೊನ್ನಯ್ಯ, ಕೆಪಿಸಿಸಿ ಸದಸ್ಯೆ ಕೆ.ಅಪ್ಪಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡಾರ ಮಲಾರ್ ಮೋನು, ಹಯಾತುಲ್ ಖಾಮಿಲ್, ಶಬೀರ್ ಸಿದ್ದಕಟ್ಟೆ, ಇಸ್ಮಾಯೀಲ್ ತಲಪಾಡಿ, ಸತೀಶ್ ಪೆಂಗಾಲ್, ಸಬಿತಾ ಮಿಸ್ಕಿತ್, ಪ್ರೇಮ್ ಬಳ್ಳಾಲ್ ಭಾಗ್, ದಿನೇಶ್ ಕೋಡಿಯಾಲ್ ಬೈಲ್, ರಮಾನಂದ ಪೂಜಾರಿ, ಮೋಹನ್ ಚೆಂಡ್ತಿಮಾರ್, ಸಲೀಂ ಪಾಂಡೇಶ್ವರ, ಜಾರ್ಜ್, ದುರ್ಗಾ ಪ್ರಸಾದ್, ಸೌಹಾನ್ ಎಸ್.ಕೆ, ರವಿ ಊರ್ವಸ್ಟೋರ್, ಕಿರಣ್ ಕುಮಾರ್, ಗಣೇಶ್ ಮೂಡಬಿದ್ರೆ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಡಿಸಿಸಿ ಉಪಾಧ್ಯಕ್ಷ ಟಿ.ಹೊನ್ನಯ್ಯ ವಂದಿಸಿದರು.