DAKSHINA KANNADA
ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್
ಮಂಗಳೂರು, ನವೆಂಬರ್ 24: ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್ನನ್ನು ಬೆಂಬಲಿಸಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
‘ಶಂಕಿತ ಉಗ್ರ ಶಾರೀಕ್ ನಮ್ಮ ಸಹೋದರ. ಮಂಗಳೂರಿನ ಕದ್ರಿ ದೇವಾಲಯದ ಮೇಲೆ ದಾಳಿಗೆ ಯತ್ನಿಸಲಾಗಿತ್ತು. ಮಂಗಳೂರು ಕೇಸರಿ ಭಯೋತ್ಪಾದಕರ ಭದ್ರಕೋಟೆಯಾಗಿದೆ. ಈ ಕಾರ್ಯಾಚರಣೆಯ ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ, ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
‘ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿ ಮಾಡಲು ನಮ್ಮ ಸಹೋದರ ಪ್ರಯತ್ನಿಸಿದ. ಈ ಕಾರ್ಯಾಚರಣೆಯಲ್ಲಿ ಅದು ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಮ್ಮ ಇತರ ಸೋದರರನ್ನು ಬಂಧಿಸಲು ಯತ್ನಿಸುತ್ತಿವೆ, ಹಿಂಬಾಲಿಸುತ್ತಿವೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ದಾಳಿ ನಡೆಸಲಾಗುವುದು’ ಎಂದು ಬೆದರಿಕೆ ಹಾಕಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನ ಒಂದು ಹಾಳೆಯ ಮಾಧ್ಯಮ ಹೇಳಿಕೆಯು ಇಂಗ್ಲಿಷ್ನಲ್ಲಿದ್ದು, ಕರಪತ್ರದ ವಿನ್ಯಾಸವನ್ನು ಹೋಲುತ್ತದೆ. ಅದರ ಮೇಲೆ 23 ನವೆಂಬರ್, 2022 ಎಂಬ ದಿನಾಂಕದ ಉಲ್ಲೇಖವಿದೆ.