LATEST NEWS
ಉಡುಪಿ – ಐಪಿಎಲ್ ಬೆಟ್ಟಿಂಗ್ ಮಾಡುತ್ತಿದ್ದ ಮೂವರು ಅರೆಸ್ಟ್

ಉಡುಪಿ ಎಪ್ರಿಲ್ 25: ಐಪಿಎಲ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಮೂವರನ್ನು ಉಡುಪಿ ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರದಿಂದ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಎಂದು ಗುರುತಿಸಲಾಗಿದೆ.
ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡ ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತಿದ್ದರೆನ್ನಲಾಗಿದೆ.

ಆರೋಪಿಗಳು ಎಪ್ರಿಲ್ 23 ರಂದು ಅಜ್ಜರಕಾಡಿನ ಭುಜಂಗ ಪಾರ್ಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಪಾರ್ಕರ್ ಎಂಬ ಬೆಟ್ಟಿಂಗ್ ಮೊಬೈಲ್ ಆ್ಯಪ್ ಸಹಾಯದಿಂದ ತಮ್ಮ ಸ್ಮಾರ್ಟ್ ಫೋನ್ ಮೂಲಕ ಐಪಿಎಲ್‌ನಲ್ಲಿ ಹೈದರಾಬಾದ್‌ನ ಸನ್‌ರೈಸರ್ ಹಾಗೂ ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ನಡೆದ ಟಿ20 ಮ್ಯಾಚ್‌ಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್‌ನ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಂಗ್ರಹಿಸಿದ್ದ 81,700ರೂ. ನಗದು, 1.35 ಲಕ್ಷ ರೂ. ಮೌಲ್ಯದ 4 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.