FILM
ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ಕುಮಾರ್ ನಿಧನ
ಬೆಂಗಳೂರು, ಮೇ 24: ಖ್ಯಾತ ಸಿನಿಮಾ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ಕುಮಾರ್ (56) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಮೋಹನ್ ಕುಮಾರ್ ಅವರು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ‘ಜಾನಪದ’ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ಪ್ರವೇಶಿಸಿ ಜನಪ್ರಿಯತೆಗಳಿಸಿದರು. ಮೂಲತಃ ಎಂಜಿನಿಯರ್ ಆದ ಇವರು ರಂಗಭೂಮಿ, ಧಾರಾವಾಹಿ, ಪತ್ರಿಕೋದ್ಯಮ, ಪ್ರಕಾಶನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು. ‘ಮೈಸೂರು ಮಲ್ಲಿಗೆ’ ಸಿನಿಮಾದ ನಾಯಕನಿಗೆ ಕಂಠದಾನ ಮಾಡಿದ್ದರು.
ಪತ್ನಿ ವತ್ಸಲಾ ಮೋಹನ್ ಅವರ ‘ಸಜ್ಜಾದನಾ ಗಣೇಶ’ ಕಾದಂಬರಿ ಆಧರಿಸಿ 2016ರಲ್ಲಿ ‘ಬೊಂಬೆಯಾಟ’ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದರು. ಈ ಸಿನಿಮಾ ಸಾಕಷ್ಟು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರಷ್ಯಾದ ಮಾಸ್ಕೊದಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಸಿನಿಮಾ ‘ಬೊಂಬೆಯಾಟ’ ಎಂಬುದು ಇದರ ಹೆಗ್ಗಳಿಕೆ. ಮೃತರು ತಾಯಿ ಕಮಲಮ್ಮ, ಕಲಾವಿದೆಯಾದ ಪತ್ನಿ ವತ್ಸಲಾ ಮೋಹನ್, ಪುತ್ರಿ ಹಾಗೂ ನಟಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ.