LATEST NEWS
ಮಂಜಾನೆಯಿಂದ ಮಂಗಳೂರಿನಾದ್ಯಂತ ಭಾರಿ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಮಂಜಾನೆಯಿಂದ ಮಂಗಳೂರಿನಾದ್ಯಂತ ಭಾರಿ ಮಳೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಮಂಗಳೂರು ಜುಲೈ 18: ಇಂದು ಮುಂಜಾನೆಯಿಂದ ಮಂಗಳೂರು ನಗರದಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ವಾಹನ ಸವಾರರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಭಾರಿಯ ಮುಂಗಾರು ಮಳೆ ಕರಾವಳಿಯಲ್ಲಿ ಅಷ್ಟಾಗಿ ಸುರಿದಿಲ್ಲ. ಅಲ್ಲದೆ ಕಳೆದ ಕೆಲ ದಿನಗಳಿಂದ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ ಮುಂಗಾರು ಮಳೆ ಇಂದು ಅಬ್ಬರದಲ್ಲಿ ಪ್ರಾರಂಭವಾಗಿದೆ.

ಹವಾಮಾನ ಇಲಾಖೆ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ 19 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಅಲ್ಲದೆ ಕರಾವಳಿಯಲ್ಲಿ ಆರಂಜ್ ಅಲರ್ಟ್ ಘೋಷಿಸಿದೆ. ಈ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸಾರ್ವಜನಿಕರು, ಪ್ರವಾಸಿಗರು ಕಡಲತೀರಗಳಿಗೆ ಭೇಟಿ ನೀಡುವ ವೇಳೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಅದು ತಿಳಿಸಿದೆ.
ಇಂದು ಬೆಳಿಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕುದ್ರೋಳಿ ಸಮೀಪ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಶಾಲೆ ಮಕ್ಕಳು ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.