LATEST NEWS
ನೂತನ ಸಂಸತ್ ಕಟ್ಟಡದಲ್ಲಿ ಐತಿಹಾಸಿಕ ’ಸೆಂಗೊಲ್’ ಸ್ಥಾಪನೆ: ಏನಿದು ಸೆಂಗೊಲ್?
ಹೊಸದಿಲ್ಲಿ,ಮೇ 25: ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದು, ತಮಿಳುನಾಡಿನ ಐತಿಹಾಸಿಕ ರಾಜದಂಡ ‘ಸೆಂಗೊಲ್ ’ಅನ್ನು ಅಲ್ಲಿ ಸ್ಥಾಪಿಸಲಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬುಧವಾರ ತಿಳಿಸಿದರು.
ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಸಾಂಕೇತಿಕವಾಗಿ ಪ್ರತಿನಿಧಿಸಲು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರು ಬ್ರಿಟಿಷ್ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರಿಂದ ‘ಸೆಂಗೊಲ್’ನ್ನು ಸ್ವೀಕರಿಸಿದ್ದರು.ಬಳಿಕ ಅದನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.
ಭಾರತವು ಬ್ರಿಟಿಷರಿಂದ ಸ್ವಾತಂತ್ರವನ್ನು ಗಳಿಸಿದಾಗ ಮೌಂಟ್ ಬ್ಯಾಟನ್ ಅವರು,ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ಅನುಸರಿಸಬೇಕಾದ ಸಮಾರಂಭ ಯಾವುದು ಎಂದು ನೆಹರುರನ್ನು ಪ್ರಶ್ನಿಸಿದ್ದರು.
ಆಗ ನೆಹರು ರಾಜಾಜಿ ಎಂದೇ ಜನಪ್ರಿಯರಾಗಿದ್ದ ಸಿ.ರಾಜಗೋಪಾಲಾಚಾರಿ ಅವರೊಂದಿಗೆ ಸಮಾಲೋಚಿಸಿದ್ದರು. ರಾಜಾಜಿ ಬಳಿಕ ಭಾರತದ ಕೊನೆಯ ವೈಸ್‌ರಾಯ್ ಆಗಿದ್ದರು. ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರವನ್ನು ಹಸ್ತಾಂತರಿಸುವ ಸಂಕೇತವಾಗಿ ರಾಜದಂಡ ‘ಸೆಂಗೊಲ್’ ನ್ನು ನೀಡುತ್ತಿದ್ದ ಚೋಳರ ಸಂಪ್ರದಾಯದ ಬಗ್ಗೆ ರಾಜಾಜಿ ನೆಹರುಗೆ ಮಾಹಿತಿ ನೀಡಿದ್ದರು.
ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ ಪ್ರಸಿದ್ಧ ಚಿನ್ನಾಭರಣಗಳ ವ್ಯಾಪಾರಿ ವುಮಿದ್ದಿ ಬಂಗಾರು ಚೆಟ್ಟಿ ಅವರು ಚಿನ್ನದ ರಾಜದಂಡವನ್ನು ವಿನ್ಯಾಸಗೊಳಿಸಿದ್ದರು. ಅದನ್ನು ತಯಾರಿಸಿದ್ದ ವುಮಿದ್ದಿ ಯತಿರಾಜುಲು (96) ಮತ್ತು ವುಮಿದ್ದಿ ಸುಧಾಕರ (88) ಅವರು ಚೆನೈನಲ್ಲಿ ವಾಸವಿದ್ದಾರೆ.
ಸ್ವಾತಂತ್ರ ದಿನದ ಮುನ್ನಾದಿನ ರಾಜದಂಡ ಹಸ್ತಾಂತರ ಸಮಾರಂಭವು ನಡೆದಿತ್ತು.
1947,ಆ.14ರಂದು ಐದು ನೂರು ವರ್ಷಗಳಷ್ಟು ಹಳೆಯದಾಗಿದ್ದ ಶೈವ ಮಠ ತಿರುವಾವದುತುರೈ ಅಧೀನಮ್‌ನ ಉಪ ಪ್ರಧಾನ ಅರ್ಚಕರು,ನಾಗಸ್ವರ ವಾದಕ ರಾಜರತ್ನಂ ಪಿಳ್ಳೈ ಮತ್ತು ಓರ್ವ ಒಡುವಾರ್ (ತಮಿಳು ದೇವಸ್ಥಾನಗಳಲ್ಲಿ ದೈವಿಕ ಗೀತೆಗಳಿಗೆ ಅಂಕಿತ ಹಾಕುವ ವ್ಯಕ್ತಿ)ರನ್ನು ವಿಮಾನದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಿಂದ ದಿಲ್ಲಿಗೆ ಕರೆಸಲಾಗಿತ್ತು.
ತಮಿಳು ಸಂಪ್ರದಾಯದಂತೆ ಸಮಾರಂಭವು ನಡೆದಿತ್ತು ಮತ್ತು ನೆಹರುರ ನಿವಾಸದಲ್ಲಿ ಸೆಂಗೊಲ್‌ನ್ನು ಅವರಿಗೆ ಹಸ್ತಾಂತರಿಸಲಾಗಿತ್ತು. ಇತ್ತೀಚಿಗೆ ತಮಿಳುನಾಡು ಸರಕಾರದ ಧಾರ್ಮಿಕ ಮತ್ತು ದತ್ತಿ ಮಂಡಳಿಯು ಸಿದ್ಧಗೊಳಿಸಿದ್ದ ನೀತಿ ಟಿಪ್ಪಣಿಯಲ್ಲಿ ಈ ಘಟನೆಯನ್ನು ನೆನಪಿಸಿಕೊಳ್ಳಲಾಗಿದೆ.
ಅಧಿಕಾರ ವರ್ಗಾವಣೆಯು ಕೇವಲ ಹಸ್ತಲಾಘವ ಅಥವಾ ದಾಖಲೆಗೆ ಸಹಿ ಹಾಕುವುದಲ್ಲ, ಅದು ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಪ್ರದಾಯಗಳೊಂದಿಗೆ ಗುರುತಿಸಿಕೊಂಡಿರಬೇಕು ಎನ್ನುವುದನ್ನು ನೆನಪಿಸಿದ ಅಮಿತ್ ಶಾ, ಸೆಂಗೊಲ್ 1947, ಆ.14ರಂದು ಜವಾಹರಲಾಲ ನೆಹರು ಅವರು ಅನುಭವಿಸಿದ್ದ ಅದೇ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ನೂತನ ಸಂಸತ್ ಕಟ್ಟಡವು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಉದಾಹರಣೆಯಾಗಿದೆ ಎಂದು ಹೇಳಿದ ಶಾ,ಉದ್ಘಾಟನೆಯ ದಿನ 40,000 ಕಾರ್ಮಿಕರನ್ನು ಪ್ರಧಾನಿಗಳು ಗೌರವಿಸಲಿದ್ದಾರೆ ಎಂದು ತಿಳಿಸಿದರು.