LATEST NEWS
ಸಂಸದರು ಕೇವಲ ಕಾಮಗಾರಿಯನ್ನು ನೋಡಿ ಹೋದರೆ ಸಾಲದು, ಇಲಾಖೆಗಳ ಅಧಿಕಾರಿಗಳಿಗೆ ಒತ್ತಡ ಹಾಕಬೇಕು -ಜಯಪ್ರಕಾಶ್ ಹೆಗ್ಡೆ

ಉಡುಪಿ ಎಪ್ರಿಲ್ 02: ಇಂದ್ರಾಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ವಿಳಂಬ ಖಂಡಿಸಿ ಮಂಗಳವಾರ ಇಂದ್ರಾಳಿ ರೈಲ್ವೆ ಮೇಲೇತುವೆ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಂಸದರು ಕೇವಲ ಕಾಮಗಾರಿಯನ್ನು ನೋಡಿ ಹೋದರೆ ಸಾಲದು, ಇಲಾಖೆಗಳ ಅಧಿಕಾರಿಗಳಿಗೆ ಒತ್ತಡ ಹಾಕಬೇಕು ಎಂದರು.
ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಇಂದ್ರಾಳಿ ರೈಲ್ವೆ ಮೇಲ್ವೇತುವೆ ಕಾಮಗಾರಿ ವಿಳಂಬ ಖಂಡಿಸಿ ಮಂಗಳವಾರ ಇಂದ್ರಾಳಿ ರೈಲ್ವೆ ಮೇಲೇತುವೆ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಸಂಸದನಾಗಿದ್ದ ವೇಳೆ ಮಂಜೂರಾದ ಮೇಲೇತುವೆ ಕಾಮಗಾರಿ ಇನ್ನೂ ಮುಗಿದಿಲ್ಲ. ಅನಂತರ ಬಂದ ಸಂಸದರು ಕೇಂದ್ರ ಸಚಿವರ ಜೊತೆ ಈ ವಿಚಾರವಾಗಿ ಸಭೆ ನಡೆಸಿದ್ದರೆ ಕಾಮಗಾರಿ ತ್ವರಿತವಾಗಿ ಮುಗಿಯುತ್ತಿತ್ತು ಎಂದು ಹೇಳಿದರು.

ರೈಲ್ವೆ ಮೇಲ್ವೇತುವೆ ಕಾಮಗಾರಿಗೆ ಅನುದಾನ ಕೊರತೆಯಿಲ್ಲ. ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಕಾಮಗಾರಿ ವಿಳಂಬವಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲಸಕ್ಕಾಗಿ ಗುತ್ತಿಗೆದಾರರೋ ಅಥವಾ ಗುತ್ತಿಗೆದಾರರಿಗಾಗಿ ಕೆಲಸವೊ ಎಂಬ ಅನುಮಾನ ಕಾಡುತ್ತಿದೆ ಎಂದರು. ಗಡುವಿನ ಮೇಲೆ ಗಡುವು ನೀಡಿದರೂ ಮೇಲೇತುವೆ ಕಾಮಗಾರಿ ಮಾತ್ರ ಆಮೆ ನಡಿಗೆಯಲ್ಲೇ ಸಾಗುತ್ತಿದೆ. ಇನ್ನಾದರೂ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿ ತ್ವರಿತವಾಗಿ ಕಾಮಗಾರಿ ಮುಗಿಸಲು ಮುಂದಾಗಬೇಕು ಎಂದು ಹೇಳಿದರು.