DAKSHINA KANNADA
ಮಂಗಳೂರಿಗೂ ಬರಲಿದೆ ‘ಇಂದಿರಾ ಕ್ಯಾಂಟೀನ್ ‘
ಮಂಗಳೂರು, ಆಗಸ್ಟ್ 28 : ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನನ್ನು ರಾಜ್ಯವ್ಯಾಪಿ ವಿಸ್ತರಿಸಲು ಸರಕಾರ ಚಿಂತನೆ ನಡೆಸಿದೆ.ಕರಾವಳಿ ನಗರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೂ ಈ ಇಂದಿರಾ ಕ್ಯಾಂಟೀನ್ ಗಳನ್ನು ತರಲು ಈಗಾಗಲೇ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಜಿಲ್ಲೆಯವರೇ ಆದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರು ಈ ನಿಟ್ಟಿಯಲ್ಲಿ ಕಾರ್ಯಪ್ರವರ್ತಗಾಗಿದ್ದಾರೆ. ಕರಾವಳಿ ನಗರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೂ ಈ ಇಂದಿರಾ ಕ್ಯಾಂಟೀನ್ ಗಳನ್ನು ತರಲು ಕಾರ್ಯಯೋಜನೆ ಮಂಗಳೂರು ರಾಜ್ಯದ ಬೇರೆ ನಗರಗಳಿಗೆ ಹೋಲಿಸಿದರೆ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಹೋಟೆಲ್ ಗಳಲ್ಲಿನ ತಂಡಿ-ತಿನಸುಗಳ ಗಳ ಬೆಲೆ ಕೂಡ ದುಬಾರಿಯಾಗಿದೆ. ಜನಸಾಮಾನ್ಯ ಒಬ್ಬ ಸಾಮಾನ್ಯ ಹೋಟೆಲಿನಲ್ಲಿ ಚಾ ತಿಂಡಿ ಮಾಡಬೇಕಾದರೆ ಕನಿಷ್ಠ ಐವತ್ತು ರೂಪಾಯಿ ಖರ್ಚಾಗುತ್ತಿದೆ. ಕೂಲಿ ಕಾರ್ಮಿಕರು, ಆಟೋ ಚಾಲಕರು, ಕಡಿಮೆ ಸಂಬಳಕ್ಕೆ ದುಡಿಯುವ ವರ್ಗ ಮಂಗಳೂರಿನಲ್ಲಿ ಹೆಚ್ಚಾಗಿದ್ದಾರೆ. ದಿನಂಪ್ರತಿ ಹೋಟೆಲಲ್ಲಿ ಆಹಾರ ಸೇವಿಸುವ ಇವರು ತಮ್ಮ ದುಡಿಮೆಯ ಬಹುಭಾಗವನ್ನು ಹೊಟೇಲ್ ಗೆ ವೆಚ್ಚ ಮಾಡುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಲು ಮಂಗಳೂರು ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉತ್ಸುಕರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ ಖಾದರ್ ಮುಖ್ಯಮಂತ್ರಿಗಳು ಈ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಉತ್ಸುಕರಾಗಿದ್ದು ಪೂರಕ ಪ್ರಕ್ರಿಯೆಗಳು ನಡೆಯುತ್ತಿದೆ. ಮಂಗಳೂರು ನಗರದಲ್ಲಿ ಈ ಯೋಜನೆ ಡಿಸೆಂಬರ್ ಅಂತ್ಯದೊಳಗೆ ಆರಂಭವಾಗಬಹುದು ಎನ್ನುತ್ತಾರೆ.
ಮಂಗಳೂರಿನ ಹೋಟೇಲ್ ಗಳ ದುಬಾರಿ ಬೆಲೆಗಳ ವಿರುದ್ದ ಕಳೆದ 5 ವರ್ಷಗಳಿಂದ ಡಿ ವೈ ಎಫ್ ಐ ಸಂಘಟನೆಯ ಆಶ್ರಯದಲ್ಲಿ ಹೋರಾಟಗಳು ನಡೆಯುತ್ತಿವೆ. ಜನಸಾಮಾನ್ಯರಿಗೆ ಕೈಗೆಟಕುವ ದರ ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ಸತತ ಒತ್ತಾಯಿಸುತ್ತಾ ಬಂದಿದೆ. ಆದರೆ ಇದೀಗ ಇಂದಿರಾ ಕ್ಯಾಂಟಿನ್ ಗಳು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಇದನ್ನು ಮಂಗಳೂರಿಗೂ ವಿಸ್ತರಿಸುವಂತೆ ಅದು ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ಮುಂದಿನ ವರ್ಷ ಚುನಾವಣೆ ಕೂಡ ಇರುವುದರಿಂದ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಪಕ್ಷದ ಜನಪ್ರತಿನಿಧಿಗಳು ಇಂದಿರಾ ಕ್ಯಾಂಟಿನ್ ಮಂಗಳೂರಿಗೂ ವಿಸ್ತರಿಸಲು ಉತ್ಸುಕರಾಗಿದ್ದಾರೆ. ಮನೆಯಿಂದ ಮಧ್ಯಾಹ್ನ ಊಟ ತರುವ ನೌಕರರು ಕೂಡ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಹೋಟೆಲ್ ನಲ್ಲಿ ಚಾ – ತಿಂಡಿ ತಿನ್ನುವ ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಕನಿಷ್ಠ ರದದಲ್ಲಿ ಉತ್ತಮ ಊಟ ಮತ್ತು ಉಪಹಾರ ವ್ಯವಸ್ಥೆ ಯಶಸ್ವಿ ನಡೆಸಲು ಇಲ್ಲಿ ಸಾಧ್ಯವಾದರೆ ಇದು ಹೆಚ್ಚಿನ ಜನರಿಗೆ ಉಪಯೋಗವಾದಿತು.