ಬ್ಯಾಂಕಾಕ್, ಏಪ್ರಿಲ್ 20: ಥೈಲ್ಯಾಂಡ್ನ ಪ್ರಸಿದ್ಧ ಪ್ರವಾಸಿ ತಾಣವಾದ ಕ್ರಾಬಿಯ ಆವೊ ನಾಂಗ್ನಲ್ಲಿ ಭಾರತೀಯ ಪ್ರವಾಸಿಗರೊಬ್ಬರು ಜನಾಂಗೀಯ ನಿಂದನೆಗೆ (Racist Abuse) ಒಳಗಾದ ಘಟನೆ ನಡೆದಿದೆ. ಉಪಹಾರದ ಬಿಲ್ ಪಾವತಿಸುವ ವಿಚಾರದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಪ್ರವಾಸಿಗನ ನಡುವೆ ಉಂಟಾದ ಸಣ್ಣ ಗೊಂದಲವು, ನಂತರ ಭಾರತದ ವಿರುದ್ಧದ ಜನಾಂಗೀಯ ನಿಂದನೆಗೆ ತಿರುಗಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ ಪ್ರಕರಣ ಸುಖಾಂತ್ಯಗೊಂಡಿದೆ.

ಕಾಶ್ಮೀರ ಮೂಲದ ಪ್ರವಾಸಿಗರೊಬ್ಬರು ಕ್ರಾಬಿಯ ರೆಸ್ಟೋರೆಂಟ್ವೊಂದಕ್ಕೆ ಭೇಟಿ ನೀಡಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದೆ. ಬಿಲ್ ಪಾವತಿಯ ಗೊಂದಲವನ್ನು ಬಗೆಹರಿಸಲು ಬಂದ ಮಹಿಳೆಯೊಬ್ಬರು, ಪ್ರವಾಸಿಗರು ಭಾರತೀಯರು ಎಂದು ತಿಳಿದ ತಕ್ಷಣ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. “ಭಾರತೀಯರು ಹಣ ನೀಡಲು ಇಷ್ಟಪಡುವುದಿಲ್ಲ” ಎಂದು ಜನಾಂಗೀಯವಾಗಿ ನಿಂದಿಸಿದಲ್ಲದೆ, ದೇಶದ ಹೆಸರನ್ನು ಹಿಡಿದು ಅತ್ಯಂತ ಅಶ್ಲೀಲ ಪದಗಳಿಂದ ನಿಂದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಪ್ರವಾಸಿಗರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಥೈಲ್ಯಾಂಡ್ ಪ್ರವಾಸಿ ಪೊಲೀಸರು (Tourist Police) ವಿಚಾರಣೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ರೆಸ್ಟೋರೆಂಟ್ ಮ್ಯಾನೇಜರ್ ಭಾರತೀಯ ಪ್ರವಾಸಿಗನ ಬಳಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.