DAKSHINA KANNADA
ಚೈನಾ ಮಾಲು ಬ್ಯಾನಿಗೆ ಚೀನಾ ಸುಸ್ತು , ನಿಂತಿತು ಕರಾವಳಿ ಮೀನುಗಳ ರಫ್ತು
ಚೈನಾ ಮಾಲು ಬ್ಯಾನಿಗೆ ಚೀನಾ ಸುಸ್ತು , ನಿಂತಿತು ಕರಾವಳಿ ಮೀನುಗಳ ರಫ್ತು
ಮಂಗಳೂರು ಅಕ್ಟೋಬರ್ 18: ಸದಾ ಕಾಲುಕೆರೆದು ವಿವಾದ ಸೃಷ್ಠಿ ಮಾಡುತ್ತಿರುವ ಚೀನಾ ಇದೀಗ ತನ್ನ ವರಸೆಯನ್ನು ಮೀನು ಮಾರಾಟದಿಂದಲೇ ಜೀವನ ಸಾಗಿಸುತ್ತಿರುವ ಮೀನಗಾರರ ಮೇಲೆ ಮಾಡಿದೆ. ಭಾರತ ಚೀನಾ ಗಡಿಯ ಡೋಕ್ಲಾಮ್ ನಲ್ಲಿ ಉಂಟಾದ ಘರ್ಷಣೆಯ ಪರಿಣಾಮವನ್ನು ರಾಜ್ಯದ ಕರಾವಳಿಯ ಮೀನುಗಾರರು ಅನುಭವಿಸುವಂತಹ ಸನ್ನಿವೇಶವನ್ನು ಚೀನಾ ಉಂಟುಮಾಡಿದೆ.. ಭಾರತ ಮತ್ತು ಚೀನದ ನಡುವಿನ ಮುಸುಕಿನ ಗುದ್ದಾಟ ರಾಜ್ಯದ ಮೀನುಗಾರಿಕಾ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಕರಾವಳಿ ಜಿಲ್ಲೆಗಳಿಂದ ಚೀನಾಕ್ಕೆ ರಪ್ತಾಗುತ್ತಿದ್ದ ಮೀನಿನ ವಹಿವಾಟಿನಲ್ಲಿ ಶೇಕಡಾ 50 ರಷ್ಟು ಇಳಿಕೆ ಕಂಡಿದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ವಿವಿಧ ಜಾತಿಯ ಮೀನುಗಳು ಅಮೇರಿಕಾ , ಜಪಾನ್ ಯುರೋಪ್ ರಾಷ್ಟ್ರಗಳು ಸೇರಿದಂತೆ ಚೀನಾಕ್ಕೆ ರಪ್ತಾಗುತ್ತಿವೆ. ಕರಾವಳಿಯ ಮೀನುಗಳಿಗೆ ಈ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ರಾಜ್ಯದ ಕರಾವಳಿಯಲ್ಲಿ ಸಿಗುವ ಬೊಂಡಾಸ್, ಕಪ್ಪೆ ಬೊಂಡಾಸ್, ಮಾಂಜಿ, ಪಾಂಪ್ಲೆಟ್, ರಿಬ್ಬನ್ ಫಿಶ್, ಸಿಗ಼ಡಿ, ಶೆಲ್ ಫಿಶ್ ಅಥವಾ ಮರುವಾಯಿ, ಬ್ಲಾಟ್ ಫಿಶ್ ಅಥವಾ ಬಾವಲಿ ಮೀನು ಸೇರಿದಂತೆ ಒಟ್ಟು 13 ಕ್ಕೂ ಹೆಚ್ಚು ಮೀನುಗಳಿಗೆ ಈ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಮಂಗಳೂರು ಮುಲ್ಪೆ ಸೇರಿದಂತೆ ರಾಜ್ಯದ ಇನ್ನಿತರ ಮೀನುಗಾರಿಕಾ ಬಂದರುಗಳಿಂದ ಚೀನಾಕ್ಕೆ ಬೊಂಡಾಸ್, ರಿಬ್ಬನ್ ಫಿಶ್, ಸಿಗಡಿ, ಶೆಲ್ ಫಿಶ್ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿದ್ದವು. ಆದರೆ ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಈ ರಫ್ತು ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಈ ರೀತಿಯ ಬೆಳವಣಿಗೆಗೆ ಚೀನಾ ಕ್ಕೆ ಭಾರತ ಮೇಲಿನ ಮುನಿಸಲ್ಲದೆ ಚೀನ ಹಾಗೂ ಅಮೇರಿಕಾ ನಡುವಿನ ಕೋಲ್ಡ್ ವಾರ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ, ಈ ಕಾರಣ ಚೀನಾ ಡಾಲರ್ ಅಭಾವ ಎದುರಿಸುತ್ತಿದೆ. ಭಾರತದಲ್ಲಿ ಚೀನಾ ವಸ್ತುಗಳಿಗೆ ಬಹಿಷ್ಕಾರಕ್ಕೆ ದೊಡ್ಡಮಟ್ಟದಲ್ಲಿ ದೇಶದಾದ್ಯಂತ ಅಭಿಯಾನ ಆರಂಭಗೊಳ್ಳುತ್ತಿದ್ದಂತೆ ಚೀನಾದ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಅಮೇರಿಕಾದೊಂದಿಗಿನ ವೈಮನಸ್ಸು ಹಾಗೂ ಭಾರತದೊಂದಿಗಿನ ಸಂಘರ್ಷಕ್ಕೆ ಚೀನ ಬೆಲೆ ತೆತ್ತಿದೆ. ಚೀನಾದ ಆರ್ಥಿಕತೆ ಕುಸಿಯುತ್ತಿದೆ. ಈ ನಡುವೆ ಭಾರತದಲ್ಲಿ ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಿರುವ ಹಿನ್ನಲೆಯಲ್ಲಿ ಪ್ರತಿಕಾರವಾಗಿ ಭಾರತದಿಂದ ಆಮದಾಗುವ ಮೀನುಗಳಿಗೆ ಕಡಿಮೆ ದರ ನಿಗದಿ ಮಾಡಿರುವ ಚೀನಾದ ವರ್ತಕರು ಆಮದು ಪ್ರಮಾಣವನ್ನು ಇಳಿಸಿದ್ದಾರೆ ಎಂದು ತಿಳಿದುಬಂದಿದೆ.ಈ ಪರಿಣಾಮ ರಾಜ್ಯದ ಕರಾವಳಿಯಿಂದ ಚೀನಾಕ್ಕೆ ರಫ್ತಾಗುತ್ತಿದ್ದ ಮೀನುಗಳ ವಹಿವಾಟಿನಲ್ಲಸಿ ಭಾರಿ ಇಳಿಕೆ ಕಂಡು ಬಂದಿದ್ದು , ಶೇಕಡ 50 ರಷ್ಟು ಆಮದು ಕಡಿತಕೊಂಡಿದೆ.ರಾಜ್ಯದ ಕರಾವಳಿಯಿಂದ ವಾರ್ಷಿಕ 1.30 ಟನ್ ನಷ್ಟು ಮೀನುಗಳು ಚೀನಾಕ್ಕೆ ರಪ್ತಾಗುತ್ತಿದ್ದವು.ಆದರೆ ಕಳೆದ ಕೆಲವು ತಿಂಗಳಿನಿಂದ ಚೀನಾಕ್ಕೆ ರಪ್ತಾಗುತ್ತಿರುವ ಮೀನುಗಳ ವಹಿವಾಟಿನಲ್ಲಿ ಶೇಕಡ 50 ರಷ್ಟು ಕಡಿತ ಉಂಟಾಗಿದೆ. 2 ವರ್ಷಗಳ ಹಿಂದ ಇದ್ದ ಮೀನಿನ ರಪ್ತುದರ ಈಗ ಶೇಕಡ 30 ರಷ್ಟು ಕಡಿತ ಮಾಡಲಾಗಿದೆ. ಒಂದೆಡೆ ಚೀನಾದಿಂದ ರಾಜ್ಯದ ಕರಾವಳಿಯ ಮೀನುಗಳ ರಪ್ತು ಕಡಿಮೆಯಾಗಿದ್ದರೂ ಇತರ ದೇಶಗಳಿಗೆ ಮೀನಿನ ರಪ್ತು ನಿರಾಂತಕವಾಗಿ ಸಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯ ಮೀನುಗಾರರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.