LATEST NEWS
ಪಾಕಿಸ್ತಾನದ ಮೇಲೆ ಭಾರತ ದಾಳಿ; ಲಾಹೋರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ನವದೆಹಲಿ, ಮೇ 8: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಿನ್ನೆ (ಮೇ 7) ಆಪರೇಷನ್ ಸಿಂಧೂರದ ಅಡಿಯಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸಂಪೂರ್ಣ ಧ್ವಂಸ ಮಾಡಲಾಗಿತ್ತು. ಈ ಘಟನೆಯಲ್ಲಿ 80ಕ್ಕೂ ಹೆಚ್ಚು ಉಗ್ರರು ಹಾಗೂ ಅವರ ಸಂಬಂಧಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿ 16 ಜನರನ್ನು ಕೊಂದಿತ್ತು. ಅಲ್ಲದೆ, ಭಾರತದ ಇನ್ನೂ 15 ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಪ್ಲಾನ್ ಮಾಡಿತ್ತು. ಆ ಪ್ರಯತ್ನವನ್ನು ಮೆಟ್ಟಿ ನಿಂತಿರುವ ಭಾರತೀಯ ಸೇನೆ ಇಂದು ಮತ್ತೆ ಪಾಕಿಸ್ತಾನದೊಳಗೆ ನುಗ್ಗಿ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದೆ. ಈ ಮೂಲಕ ಆಪರೇಷನ್ ಸಿಂಧೂರವನ್ನು ಮುಂದುವರೆಸಿದೆ.
ಭಾರತೀಯ ಸೇನೆಯಿಂದ ಪಾಕಿಸ್ತಾನದ ಲಾಹೋರ್, ಕರಾಚಿ, ಸಿಯೋಲ್ ಕೋಟ್ ಮೇಲೆ ದಾಳಿ ನಡೆಸಲಾಗಿದೆ. ಭಾರತದ ಮೇಲೆ ಪಾಕ್ ದಾಳಿಯನ್ನು ವಿಫಲಗೊಳಿಸಿದ ಬಳಿಕ ಭಾರತೀಯ ಸೇನೆಯಿಂದ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಭಾರತದ ಚಂಡೀಗಢ, ಆವಂತಿಪೊರ, ಜಲಂಧರ್, ಲೂಧಿಯಾನ, ಅಮೃತಸರ, ಪಠಾಣಕೋಟ್, ಕಪೂರ್ತಲಾ, ನಲ, ಫಲೋಡಿ, ಉತ್ತರಲೈ, ಭುಜ್, ಜಮ್ಮು, ಶ್ರೀನಗರ, ಆಧಂಪುರ, ಭಟಿಂಡಾ ಮೇಲೆ ದಾಳಿಗೆ ಯತ್ನಿಸಿತ್ತು. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಮುಂದಾಗಿತ್ತು. ಪಾಕಿಸ್ತಾನ ಸೇನೆಯ ದಾಳಿಯನ್ನು ವಿಫಲಗೊಳಿಸಿರುವ ಭಾರತೀಯ ಸೇನೆ S-400 ಏರ್ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ಚೀನಾ ನಿರ್ಮಿತ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸ ಮಾಡಿದೆ. ಪಾಕಿಸ್ತಾನದ ಕ್ಷಿಪಣಿಗಳ ಅವಶೇಷಗಳನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನದ HQ-9 ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ನಾಶಪಡಿಸಿದ್ದು, ಅದರ ಫೋಟೋಗಳು ವೈರಲ್ ಆಗಿವೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ. ಪಶ್ಚಿಮ ಭಾರತ, ಉತ್ತರ ಭಾರತದ ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿಗೆ ಯತ್ನಿಸಿತ್ತು. S-400 ಏರ್ಡಿಫೆನ್ಸ್ ಮೂಲಕ ಪಾಕಿಸ್ತಾನದ ದಾಳಿ ತಡೆದಿದ್ದೇವೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಮೇಲೂ ದಾಳಿ ಮಾಡಿದ್ದೇವೆ ಎಂದು ಹೇಳಿದೆ. ಭಾರತೀಯ ಸೇನೆಯ ಈ ದಾಳಿಯಿಂದ ಪಾಕಿಸ್ತಾನದ ವಾಯು ರಕ್ಷಣಾ ಘಟಕಗಳು ಗಂಭೀರ ಹಾನಿಯನ್ನು ಅನುಭವಿಸಿವೆ.
ಭಾರತದ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಜಮ್ಮು-ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲ, ಉರಿ, ಪೂಂಚ್, ಮೆಂಧರ್, ರಜೌರಿ ಸೆಕ್ಟರ್ನಲ್ಲಿ ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಫಿರಂಗಿ ಬಳಸಿ ಅಪ್ರಚೋದಿತ ದಾಳಿ ನಡೆಸಲಾಗಿತ್ತು. ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ 16 ಜನರು ಮೃತಪಟ್ಟಿದ್ದಾರೆ. ಮೂವರು ಮಹಿಳೆಯರು, ಐವರು ಮಕ್ಕಳು ಸೇರಿದಂತೆ 16 ಜನ ಸಾವನ್ನಪ್ಪಿದ್ದಾರೆ. ಈ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನ ಸೇನೆ ದಾಳಿ ಮುಂದುವರಿಸಿದರೆ ದಾಳಿ ಮುಂದುವರೆಸಲಾಗುವುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.
ಇಂದು ದೇಶಾದ್ಯಂತ 10 ನಗರಗಳಲ್ಲಿ ಡ್ರೋನ್ ದಾಳಿಯ ವರದಿಗಳ ನಡುವೆ, ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ಪಾಕಿಸ್ತಾನ ಸೇನೆಯ ವಾಯು ರಕ್ಷಣಾ ಘಟಕಗಳು ಭಾರೀ ಹಾನಿಯನ್ನು ಅನುಭವಿಸಿವೆ ಎಂದು ಮೂಲಗಳು ತಿಳಿಸಿವೆ. ಚೀನಾ ಅಭಿವೃದ್ಧಿಪಡಿಸಿದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಘಟಕಗಳನ್ನು ಹೊಡೆದುರುಳಿಸಲಾಗಿದ್ದು, ಲಾಹೋರ್, ಸಿಯಾಲ್‌ಕೋಟ್ ಮತ್ತು ಇನ್ನೊಂದು ನಗರದಲ್ಲಿ ಪಾಕಿಸ್ತಾನಿ ಸೇನೆಗೆ ರಕ್ಷಣೆಯಿಲ್ಲದಂತೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೃತಸರದಲ್ಲಿ ಪತ್ತೆಯಾದ ಪಾಕಿಸ್ತಾನಿ ಕ್ಷಿಪಣಿ ಅವಶೇಷಗಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಡ್ರೋನ್ ದಾಳಿಗಳು ನಡೆದಿವೆ.