LATEST NEWS
ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿ ಮಂಗಳೂರಿನಲ್ಲೇ ಮುಂದುವರಿಕೆ

ಮಂಗಳೂರು : ಕರಾವಳಿ ಕರ್ನಾಟಕದ ತೆರಿಗೆದಾರರ ಹಿತಾಸಕ್ತಿಗೆ ಪೂರಕವಾಗಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಾರ್ಯಾಲಯವನ್ನು ಮಂಗಳೂರಿನಲ್ಲಿಯೇ ಮುಂದುವರಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ (ಆಡಳಿತ) ಕಚೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯಲ್ಲಿ ವಿಲೀನಗೊಳಿಸುವ ನಿರ್ಧಾರ ಕೇಂದ್ರ ಸರಕಾರ ಕೈಗೊಂಡಿತ್ತು. ಆದರೆ ವಿಲೀನಗೊಳಿಸುವ ಪ್ರಸ್ತಾವ ಹೊರ ಬೀಳುತ್ತಿದ್ದಂತೆ ಕರಾವಳಿ ಜನರಿಂದ ವಿರೋಧ ವ್ಯಕ್ತವಾಗಿತ್ತು. ಉದ್ಯಮಿಗಳು ಸೇರಿದಂತೆ ವಿವಿಧ ಸಂಘಟನೆಗಳು ವಿಲೀನದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮನವಿಗಳನ್ನು ಸಲ್ಲಿಸಿದ್ದರು.

ಇದೀಗ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಮಾತನಾಡಿದ್ದು, ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಪ್ರದಾನ ಆಯುಕ್ತರ ಕಛೇರಿಯನ್ನು ಮಂಗಳೂರಿನಲ್ಲಿಯೇ ಮುಂದುವರೆಸಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದಾರೆ. ಈ ಕುರಿತಂತೆ ಸಹಕರಿಸಿದ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೂ ನಳಿನ್‌ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.