DAKSHINA KANNADA
ಮಂಗಳೂರು ಜೈಲಿನಲ್ಲಿ ಕೈದಿಗಳ ಮಜಾ, ಆಗಬೇಕಿದೆ ಇವರಿಗೆ ಅಂಡಮಾನ್ ಜೈಲಲ್ಲಿ ಸಜಾ
ಮಂಗಳೂರು ಜೈಲಿನಲ್ಲಿ ಕೈದಿಗಳ ಮಜಾ, ಆಗಬೇಕಿದೆ ಇವರಿಗೆ ಅಂಡಮಾನ್ ಜೈಲಲ್ಲಿ ಸಜಾ
ಮಂಗಳೂರು,ಅಕ್ಟೋಬರ್ 19: ಸಮಾಜದಲ್ಲಿ ಕೇಸು,ಕೋರ್ಟು,ಜೈಲು ಗಳಿಂದ ದೂರವಿರುವ ಒಂದು ವರ್ಗವಿದ್ದರೆ, ಇವುಗಳನ್ನೇ ಬಯಸುವ ಇನ್ನೊಂದು ವರ್ಗವೂ ಇದೆ.ಈ ವರ್ಗಕ್ಕೆ ಇದೆಲ್ಲಾ ಒಂದು ಫ್ಯಾಷನ್ ಆಗಿ ಬಿಟ್ಟಿದ್ದು, ಜೈಲಿಗೆ ಹೋಗುವುದು ಮಾವನ ಮನೆಗೆ ಹೋದಂತ ಅನುಭವ ಈ ವರ್ಗದ್ದಾಗಿದೆ.
ಅಂದ ಹಾಗೆ ಈ ಜೈಲಿನೊಳಗೆ ಕೆಲವರು ತಾವು ಮಾಡದ ತಪ್ಪಿಗಾಗಿ ಹೋದರೆ, ಇನ್ನು ಕೆಲವರು ತಮ್ಮ ಕರ್ಮವನ್ನು ತೊಳೆಯುದಕ್ಕೋಸ್ಕರ ಹೋಗುತ್ತಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟ ಸೆರೆಮನೆಗಳ ಬಗ್ಗೆ ನಾವು ಪುಸ್ತಕದಲ್ಲಿ ಬರೆದಿರುವುದನ್ನು ಓದಿ ತಿಳಿದುಕೊಂಡಿದ್ದೇವೆ.
ಬೆಳಕಿನ ಮುಖವನ್ನೇ ನೋಡಿರದ ಜೈಲು ಕೋಣೆ, ಒಬ್ಬ ವ್ಯಕ್ತಿ ನಿಂತುಕೊಳ್ಳುವಷ್ಟು ಅಗಲ ಮಾತ್ರವಿದ್ದ ಜೈಲು ಹೀಗೆ ಹಲವು ಪ್ರಕಾರದ ಜೈಲುಗಳಿದ್ದವು ಅನ್ನೋದನ್ನೂ ಕೇಳಿದ್ದೇವೆ. ಈ ಕಾರಣಕ್ಕಾಗಿಯೇ ಅಂದಿನಿಂದ ಇಂದಿನವರೆಗೂ ಜೈಲೆಂದರೆ ಒಂದು ರೀತಿಯ ಭಯ ಎಲ್ಲರ ಎದೆಯಲ್ಲೂ ಬೇರೂರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜೈಲುಗಳು ಈ ಮೊದಲು ಹೇಳಿದಂತೆ ಮಾವನ ಮನೆಯಾಗಿ ಬದಲಾಗಿದೆ. ಇಂಥಹ ಒಂದು ಮಾವನ ಮನೆ ಮಂಗಳೂರಿನ ಜೈಲು ಕೂಡಾ ಆಗಿದೆ. ಅಕ್ರಮ ಚಟುವಟಿಕೆ ನಡೆಸಿ ಜೈಲಿಗೆ ಬಂದವರು, ಜೈಲಿನ ಒಳಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜೈಲಿನೊಳಗಿದ್ದೇ ಗೇಮ್, ಡೀಲ್, ಹಫ್ತಾವೆಲ್ಲಾ ಈ ಜೈಲಿನೊಳಗೆ ರಾಜಾರೋಷವಾಗಿ ನಡೆಯುತ್ತಿದೆ.
ಕೈದಿಗಳಿಗೆ ತಿನ್ನುವ ಆಸೆಯಾದಾಗ ಖೈದಿಗಳಿಗೆ ಚಿಕನ್,ಮಟನ್,ಫಿಶ್ ಓಪನ್ ಆಗಿ ಸಫ್ಲೈ ಆಗುತ್ತದೆ. ಗಾಂಜಾ ಮತ್ತು ಗುಂಡು ಹೊಡೆಯಬೇಕೆಂದಾದಾಗ ಮದ್ಯದ ಬಾಟಲಿಗಳ ಬಾಕ್ಸ್ ಜೊತೆ ಗಾಂಜಾದ ಪೊಟ್ಟಣಗಳೂ ಕೈದಿಗಳ ಕಾಲಿನಡಿಗೆ ಬಂದು ಬೀಳುತ್ತಿದೆ. ಅಂದ ಹಾಗೆ ಈ ಅಕ್ರಮಗಳೆಲ್ಲಾ ಪೋಲೀಸರ ಗಮನಕ್ಕೆ ಬಾರದೆ ಇರುವಂತಹುದಲ್ಲ. ಪೊಲೀಸರ ಸಮ್ಮುಖದಲ್ಲಿ ಎಲ್ಲವೂ ಖುಲ್ಲಾಂ ಖುಲ್ಲಾ ನಡೆಯುತ್ತಿದ್ದರೂ ಹಿರಿಯ ಅಧಿಕಾರಿಗಳು ಮಾತ್ರ ಕುರುಡು ಕಾಂಚಾಣದ ಆಸೆಯಿಂದ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಚಿಕನ್ ಬಿರಿಯಾನಿ, ಒಂದೇ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸುಮಾರು 200 ಜನರಿಗಾಗುವಷ್ಟು ಅಕ್ಕಿ ಕಡುಬು, ದೊಡ್ಡ ಗಾತ್ರದ ಪಾತ್ರೆ ತುಂಬಾ ಕರಾವಳಿಯ ಸ್ಪೆಷಲ್ ಫಿಶ್ ಪುಳಿಮುಂಚಿ, ಭಾರೀ ಪ್ರಮಾಣದ ತಂಬಾಕು, ಗುಟ್ಕಾ, ಸಿಗರೇಟ್ ಪ್ಯಾಕೇಟ್, ಪ್ಲಾಸ್ಟಿಕ್ ಗೋಣಿ ತುಂಬಾ ಕಲ್ಲಂಗಡಿ. ಖೈದಿಗಳ ಭೇಟಿಗೆ ಬರುವ ಅವರ ಸಂಬಂಧಿಕರು ಹಾಗೂ ಸ್ನೇಹಿತರು ಜೈಲಿನೊಳಗೆ ಯಾವುದೇ ಅಡ್ಡಿಯಿಲ್ಲದೆ ಈ ಎಲ್ಲ ವಸ್ತುಗಳನ್ನು ನಿರಾತಂಕವಾಗಿ ಸಾಗಿಸುತ್ತಿದ್ದಾರೆ.
ಸೇಬು, ದಾಳಿಂಬೆ, ಕಿತ್ತಾಳೆ, ಅನಾನಸು, ಜಿಲೇಬಿ, ಸಾಟು, ಅಕ್ಕಿ ಗೋಣಿ, ಬೆಳ್ತಿಗೆ ಅಕ್ಕಿ, ನೀರುಳ್ಳಿ, ಮೆಣಸು, ಟೊಮೆಟೋ, ಸೌತೆಕಾಯಿ, ಕೊತ್ತಂಬರಿ, ತೊಂಡೆ ಕಾಯಿ ಸಹಿತ ದಿನದ ಅಡುಗೆಗೆ ಬೇಕಾಗುವ ವಿವಿಧ ಸಾಮಗ್ರಿಗಳು ನಿರಾಂತಕವಾಗಿ ಒಳಗೆ ಸಫ್ಲೈ ಆಗುತ್ತಿವೆ.
ಅಷ್ಟೇ ಅಲ್ಲ ಸುಮಾರು 200 ಮಂದಿಗೆ ಬಡಿಸುವಷ್ಟು ಉಪ್ಪಿನ ಕಾಯಿಯಯ ಭರಣಿಗಳನ್ನು ಜೈಲಿನೊಳಗೆ ಕಳುಹಿಸಲಾಗುತ್ತಿದೆ. ನಿಷ್ಟೆಯಿಂದ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿಕೊಂಡಿರುವ ಜೈಲು ಕಾಯುವ ಸಿಬ್ಬಂದಿಗಳು ಇಲ್ಲಿ ತಮ್ಮ ನಿಷ್ಟೆಯನ್ನು ಕೈದಿಗಳ ಕಾಲ ಬುಡದಲ್ಲಿ ಪಣಯಿಟ್ಟಿದ್ದಾರೆ.
ಕೆಲವು ನಿಷ್ಟ ಹಾಗೂ ಪ್ರಾಮಾಣಿಕ ಸಿಬ್ಬಂದಿಗಳು ಅಕ್ರಮವನ್ನು ತಡೆಯಲು ಮುಂದಾದಾಗ ಜೈಲಿನ ಹಿರಿಯ ಅಧಿಕಾರಿಗಳೂ ಅವರನ್ನೇ ದಬಾಯಿಸುವಂತಹ ಕಾರ್ಯ ಮಂಗಳೂರು ಜೈಲಿನಲ್ಲಿ ನಡೆಯುತ್ತಿದೆ. ಕೈದಿಗಳನ್ನು ಭೇಟಿಯಾಗಲು ಬರುವ ಖೈದಿಗಳ ಸಂಬಂಧಿಕರಿಂದ ವಶಪಡಿಸಿಕೊಂಡ ಗಾಂಜಾ,ಮೊಬೈಲ್,ಹಣ ಎಲ್ಲವೂ ಮತ್ತೆ ಯಾವ ಯಾವ ಕೈದಿಗಳಿಗೆ ಅದು ಸೇರಬೇಕೋ ಅದನ್ನು ಅಕ್ರಮ ದಂಡವಿಧಿಸಿ ಅವರಿಗೇ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನಂತು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದಾರೆ.
ಜೈಲಿಗೆ ಕೆಲವು ವಸ್ತುಗಳು ನೇರವಾಗಿ ಕೈದಿಗಳ ಸಂಬಂಧಿಕರ ಮೂಲಕ ಜೈಲೊಳಗೆ ಬಂದರೆ, ಇನ್ನು ಕೆಲವು ವಸ್ತುಗಳು ಹೊರಗಿನಿಂದ ಜೈಲು ಆವರಣಗೋಡೆಯೊಳಗೆ ಬಿಸಾಕುವ ಮೂಲಕ ಸೇರುತ್ತದೆ. ಈ ಬೀಸಾಕಿದಂತಹ ವಸ್ತುಗಳನ್ನು ಸಂಗ್ರಹಿಸಿ ಕೈದಿಗಳಿಗೆ ತಲುಪಿಸುವ ಕಾರ್ಯವನ್ನೂ ಜೈಲು ಸಿಬ್ಬಂದಿಗಳೇ ಮಾಡುತ್ತಿರುವ ಪಕ್ಕಾ ಮಾಹಿತಿಯೂ ಲಭ್ಯವಾಗಿದೆ. ಜೈಲಿನೊಳಗೆ ಇಷ್ಟೆಲ್ಲಾ ಅನುಕೂಲತೆಗಳಿರುವಾಗ, ಜೈಲಿನ ಹೊರಗೆ ಮೈ ಕೈ ಬಗ್ಗಿಸಿ ಕಷ್ಟಪಟ್ಟು ದುಡಿದು ತಿನ್ನುವ ಅನಿವಾರ್ಯತೆಯೂ ಈ ಕೈದಿಗಳಿಗಿಲ್ಲ.
ಅಪರಾಧ ಮಾಡುವುದು ತಪ್ಪು, ಅಪರಾಧ ಮಾಡಿದರೆ ಜೈಲು ಶಿಕ್ಷೆ ಖಚಿತ ಎಂದು ತಿಳದಿದ್ದರೂ, ಜೈಲಿನಲ್ಲಿ ತಮಗೆ ದೊರಕುವ ರಾಜಾತಿಥ್ಯದಿಂದಾಗಿ ಈ ವರ್ಗ ಮತ್ತೆ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದೆ. ಇಂಥ ಆತಿಥ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಪದೇ ಪದೇ ಕೊಲೆ,ಕಳ್ಳತನ,ದರೋಡೆ, ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವ ಕೈದಿಗಳಿಗೆ ಅಂಡಮಾನಿನ ಕಾಲಾಪಾನಿಯಂಥಹ ಜೈಲಿನ ರುಚಿ ತೋರಿಸಬೇಕಿದೆ.ಇದರಿಂದ ಮಾತ್ರ ಇಂಥ ಕಟುಕರಿಗೆ ತಮ್ಮ ತಪ್ಪಿನ ಅರಿವು ತಿಳಿಯಲಿದೆ.