DAKSHINA KANNADA
ಕಟೀಲು ದೇವಳದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ಜಾರಿ, ಭಕ್ತರಿಂದ ಆಕ್ರೋಶ: ತಾತ್ಕಾಲಿಕ ತಡೆ
ಮಂಗಳೂರು, ಆಗಸ್ಟ್ 01: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇನ್ನು ಮುಂದೆ ದೇವಳದ ರಥಬೀದಿಯಲ್ಲಿ ಮತ್ತು ಬಸ್‌ಸ್ಟ್ಯಾಂಡ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಹಣ ನೀಡಬೇಕಾಗುತ್ತದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.
ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರ ಸುತ್ತೋಲೆ ಮೇರೆಗೆ ದೇವಳದ ರಥಬೀದಿ ಮತ್ತು ಬಸ್ಸು ನಿಲ್ದಾಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಹಣ ನೀಡಿ ನಿಲುಗಡೆ ಮಾಡುವಂತೆ ಪರಿವರ್ತಿಸಲಾಗಿದೆ.
ಆಡಳಿತ ಮಂಡಳಿ ದರದ ಕುರಿತು ಬ್ಯಾನರ್ ಅಳವಡಿಸಿದ್ದು ದ್ವಿಚಕ್ರ ವಾಹನ 10 ರೂ, ತ್ರಿಚಕ್ರ ವಾಹನ 20ರೂ, ಲಘುವಾಹನ 30ರೂ ಹಾಗೂ ಘನ ವಾಹನಕ್ಕೆ 50 ರೂ ನಿಗದಿಪಡಿಸಲಾಗಿದೆ. ವಾಹನ ಪಾರ್ಕಿಂಗ್ ಶುಲ್ಕ ದರ ನಿಗದಿಪಡಿಸಿರುವುದರಿಂದ ದೇವಳಕ್ಕೆ ಬರುವ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ ದೇವಳದ ಆಡಳಿತ ಮಂಡಳಿ ಪೇ ಪಾರ್ಕಿಂಗ್ ಬಗ್ಗೆ ಸರ್ಕಾರದ ಧಾರ್ಮಿಕ ಇಲಾಖೆಯಿಂದ ಆದೇಶ ಬಂದಿದ್ದು ಈ ಬಗ್ಗೆ ಬ್ಯಾನರ್ ಅಳವಡಿಸಲಾಗಿದೆ. ಈವರೆಗೆ ಪೇ ಪಾರ್ಕಿಂಗ್ ಆರಂಭಿಸಿಲ್ಲವೆಂದು ತಿಳಿಸಿದೆ.
ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸು ಮೇರೆಗೆ ತಕ್ಷಣದಿಂದ ಪಾರ್ಕಿಂಗ್ ಶುಲ್ಕ ಸಂಗಹ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು ತಾಂತ್ರಿಕ ಪ್ರಕ್ರಿಯೆಗಳ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಳದ ಮೂಲಗಳು ತಿಳಿಸಿವೆ.