LATEST NEWS
ಭಾರಿ ಮಳೆ ಸಾಧ್ಯತೆ ಹವಾಮಾನ ಇಲಾಖೆಯಿಂದ ಎರಡು ದಿನ ಆರೆಂಜ್ ಅಲರ್ಟ್

ಭಾರಿ ಮಳೆ ಸಾಧ್ಯತೆ ಹವಾಮಾನ ಇಲಾಖೆಯಿಂದ ಎರಡು ದಿನ ಆರೆಂಜ್ ಅಲರ್ಟ್
ಮಂಗಳೂರು ಅಕ್ಟೋಬರ್ 18: ಕಳೆದ 2 ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು ಹವಮಾನ ಇಲಾಖೆ ಕರಾವಳಿಗೆ ಮುಂದಿನ ಎರಡು ದಿನಗಳ ಆರಂಜ್ ಅಲರ್ಟ್ ಎಚ್ಚರಿಕೆ ನೀಡಿದ್ದು ಮುಂದಿನ ಎರಡು ದಿನಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಕರಾವಳಿಯಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದ್ದು ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಮಧ್ಯ ಅರಬ್ಬೀ ಸಮುದ್ರದಿಂದ ಕರ್ನಾಟಕ ಕರಾವಳಿ ಕಡೆಗೆ ಗಂಟೆಗೆ 55-65 ಕಿ.ಮೀ.ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯುದಂತೆ ಎಚ್ಚರಿಸಲಾಗಿದೆ.

ಗುರುವಾರ ಮಧ್ಯಾಹ್ನವರೆಗೆ ದ.ಕ, ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಏಕಾಏಕಿ ದಟ್ಟ ಮೋಡ ಕವಿದು ಗುಡುಗು ಸಹಿತ ಮಳೆ ಸುರಿದಿದೆ. ಮೂಡುಬಿದಿರೆ, ಬಂಟ್ವಾಳ, ಗುರುಪುರ, ಕಡಬ ಮೊದಲಾದೆಡೆ ಉತ್ತಮ ಮಳೆಯಾಗಿದ್ದು, ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುರತ್ಕಲ್, ವಿಟ್ಲ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ರಾತ್ರಿಯೂ ಮಳೆಯಾಗಿದೆ. ಕೊಕ್ಕರ್ಣೆ, ಮಂದಾರ್ತಿ, ಹೆಬ್ರಿ, ಪಡುಬಿದ್ರಿ, ಸಿದ್ದಾಪುರ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಆರ್ಡಿ, ಬೆಳ್ಮಣ್ಣು, ಉಡುಪಿ, ಬ್ರಹ್ಮಾವರ, ಕುಂದಾಪುರ ಭಾಗದಲ್ಲಿ ಬಿಟ್ಟುಬಿಟ್ಟು ಮಳೆ ಸುರಿದಿದೆ.
ಗುರುವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸರಾಸರಿ 5.1 ಮಿ.ಮೀ. ಮಳೆಯಾಗಿದ್ದು, ಬಂಟ್ವಾಳ 3.8, ಬೆಳ್ತಂಗಡಿ 3.9, ಮಂಗಳೂರು 4.4, ಪುತ್ತೂರು 5, ಸುಳ್ಯ 8.4 ಮಿ.ಮೀ. ದಾಖಲಾಗಿದೆ. ಉಡುಪಿ 2.5, ಕುಂದಾಪುರ 11.1, ಕಾರ್ಕಳ 6.5 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ 7.50 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ಉಷ್ಣಾಂಶ 33.8 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 23.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.