DAKSHINA KANNADA
ಅಕ್ರಮ ಮರ ಸಾಗಾಟ ದಂಧೆ ಗ್ರಾ.ಪಂ. ಸದಸ್ಯ ಸೇರಿ ಮೂವರು ಆರೆಸ್ಟ್

ಪುತ್ತೂರು ಜನವರಿ 20: ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಜಾಲ್ಸೂರು ಗ್ರಾಮಪಂಚಾಯತ್ ಸದಸ್ಯ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಜಾಲ್ಸೂರು ಗ್ರಾಮಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮಹಮ್ಮದ್ ಸೋಯಾಬ್ ದೇಲಂಪಾಡಿ, ಅಭಿಲಾಷ್ ಗೌಡ ಅರಕಲಗೂಡು ಎಂದು ಗುರುತಿಸಲಾಗಿದೆ. ಆರೋಪಿಗಳು ಜನವರಿ 19 ರಂದು ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್ಬೋಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಇಟ್ಟಿರುವುದಲ್ಲದೆ ಸಾಗಾಟಕ್ಕೆ ಯತ್ನಿಸಿದ್ದಾರೆ. ಪ್ರಕರಣದಲ್ಲಿ ವಶಪಡಿಸಿದ ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ.

ಸ್ಥಳದಿಂದ ಸಾಗಾಟವಾಗಿದ್ದ ಕಿರಾಲ್ಬೋಗಿಯ 27 ದಿಮ್ಮಿಗಳು, ಒಂದು ಲಾರಿಯನ್ನು ಕೇರಳ ಗಡಿ ಭಾಗದಲ್ಲಿ ವಶಪಡಿಸಲಾಗಿದೆ. ಇದರ ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ.