BANTWAL
ಪರಂಗಿಪೇಟೆಯಲ್ಲಿ ಅಕ್ರಮ ಮೀನು ಮಾರುಕಟ್ಟೆ ತೆರವಿಗೆ ವ್ಯಾಪಾರಿಗಳ ವಿರೋಧ

ಪರಂಗಿಪೇಟೆಯಲ್ಲಿ ಅಕ್ರಮ ಮೀನು ಮಾರುಕಟ್ಟೆ ತೆರವಿಗೆ ವ್ಯಾಪಾರಿಗಳ ವಿರೋಧ
ಬಂಟ್ವಾಳ ಡಿಸೆಂಬರ್ 13: ಬಂಟ್ವಾಳ ತಾಲೂಕಿನ ಪರಂಗಿಪೇಟೆಯಲ್ಲಿ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಟೆಂಟ್ ನಿರ್ಮಿಸಿ ಮೀನು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಪಕ್ಕದಲ್ಲೇ ಇರುವ ಈ ಸ್ಥಳದಲ್ಲಿ ಕಳೆದ ಕೆಲವು ತಿಂಗಳಿನಿಂದ ಮೀನು ಮಾರಾಟ ನಡೆಸಲಾಗುತ್ತಿತ್ತು. ಮೀನು ಮಾರಾಟದ ವಾಹನಗಳು ಹಾಗೂ ಗ್ರಾಹಕರ ವಾಹನಗಳು ಹೆದ್ದಾರಿಯಲ್ಲೇ ನಿಲ್ಲಿಸುತ್ತಿದ್ದ ಪರಿಣಾಮ ಇಲ್ಲಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿತ್ತು.

ಈ ನಡುವೆ ಇಂದು ರೈಲ್ವೇ ಅಧಿಕಾರಿಗಳು ಹಾಗೂ ಪೋಲೀಸರು ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಟೆಂಟ್ ಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಆದರೆ ಈ ಪ್ರಕ್ರಿಯೆಗೆ ವ್ತಾಪಾರಸ್ಥರು ಹಾಗೂ ಕೆಲವು ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ವ್ಯಾಪಾರಸ್ಥರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆದಿದೆ. ಸ್ಥಳದಲ್ಲಿ ಕೊಂಚ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದರೂ ಸ್ಥಳೀಯ ಪೋಲೀಸರು ಸ್ಥಳಕ್ಕೆ ಆಗಮಿಸದೆ ಉದಾಸೀನತೆ ಪ್ರದರ್ಶಿಸಿದ ಘಟನೆಯೂ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿ ಬಂಟ್ವಾಳ ಎಎಸ್ಪಿ ಸ್ಥಳಕ್ಕೆ ಆಗಮಿಸಿ ಗುಂಪುಗಳನ್ನು ಚದುರಿಸಿದ್ದಾರೆ. ತೆರವು ವಿಚಾರಕ್ಕಡ ಸಂಬಂಧಿಸಿದಂತೆ ಎಎಸ್ಪಿ ರೈಲ್ವೇ ಅಧಿಕಾರಿಗಳು ಹಾಗೂ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.