LATEST NEWS
ಅಕ್ರಮ ಮರಳು ದಂಧೆ – ಕೊಟ್ಟಾರಿ ಕುದ್ರು, ಗಟ್ಟಿ ಕುದ್ರು ಕೊಚ್ಚಿ ಹೋಗುವ ಭೀತಿ: ಆತಂಕದಲ್ಲಿ ಸ್ಥಳೀಯರು

ಮಂಗಳೂರು ಮಾರ್ಚ್ 04: ಉಳ್ಳಾಲ ತಾಲೂಕಿನ ಹರೇಕಳ ಮತ್ತು ಅಂಬ್ಲಮೊಗರು ಗ್ರಾಮಳ ವ್ಯಾಪ್ತಿಗೊಳಪಡುವ ಕೊಟ್ಟಾರಿ ಕುದ್ರು, ಗಟ್ಟಿಕುದ್ರು ದ್ವೀಪಗಳಲ್ಲಿ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಮಾತ್ರವಲ್ಲದೆ, ಉಭಯ ದ್ವೀಪಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಭಯ ದ್ವೀಪಗಳ ಉಳಿಸಿ ಹೋರಾಟ ಸಮಿತಿ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿ ಎದುರು ಮಂಗಳವಾರ ಆಯೋಜಿಸಲಾದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಮಾತನಾಡಿದರು. ಕೊಟ್ಟಾರಿ ಕುದ್ರು, ಗಟ್ಟಿ ಕುದ್ರುವಿನ ನಾಗರಿಕರ ಹೋರಾಟದಲ್ಲಿ ಜನಪರ ಸಂಘಟನೆಗಳು ಜತೆಯಾಗಿದ್ದು, ಅಕ್ರಮ ಮರಳುಗಾರಿಕೆ ನಿಲ್ಲುವವರೆಗೆ ಹೋರಾಟ ಮುಂದುವರಿಯಲಿದೆ. ಮರಳು ದಂಧೆಕೋರರನ್ನು ಗೂಂಡಾ ಕಾಯ್ದೆಗೊಳಪಡಿಸಿ ಗಡಿಪಾರು ಮಾಡಬೇಕು. ಆ ಮೂಲ ದ್ವೀಪವಾಸಿಗಳ ಬದುಕು ರಕ್ಷಿಸಬೇಕು ಹಾಗೂ ದ್ವೀಪಗಳನ್ನು ಉಳಿಸಬೇಕು ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ಸಮಿತಿಯ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಉಳಿಯ ದ್ವೀಪದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಹೋರಾಟದ ಮೂಲಕ ನಿಲ್ಲಿಸುವ ಕಾರ್ಯ ಆಗಿದ್ದು, ಇದೀಗ ಹರೇಕಳದ ಉಭಯ ದ್ವೀಪಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರನ್ನು ಬೆನ್ನಟ್ಟಿ ತಡೆಯುವ ಕೆಲಸ ಹೋರಾಟದ ಮೂಲಕ ನಡೆಯಬೇಕು. ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿರುವ ಶಕ್ತಿಗಳನ್ನು ಬಯಲಿಗೆಳೆಯಲು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀತಾ ಡಿಸೋಜಾ, ಸ್ಥಳೀಯರಾದ ಕಿಶೋರ್ ಡಿಸೋಜಾ, ನೆಲ್ಸನ್, ಸಾಮಾಜಿಕ ಹೋರಾಟಗಾರರಾದ ಅಶುಂತ, ಯೋಗೀಶ್ ಜಪ್ಪಿನಮೊಗರು, ಇನ್ನಿತರರು ಉಪಸ್ಥಿತರಿದ್ದರು