DAKSHINA KANNADA
ಕಾನೂನೂ ಬಾಹಿರ ಮರಳುಗಾರಿಕೆ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಿ
ಪುತ್ತೂರು ಡಿಸೆಂಬರ್ 16 : ದ.ಕ.ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸಲು ಸರ್ಕಾರ ಕಾನೂನುಕ್ರಮ ಕೈಗೊಳ್ಳಬೇಕು ಮತ್ತು ಕಾನೂನು ರೀತಿಯಲ್ಲಿ ಸರ್ಕಾರಕ್ಕೆ ರಾಜಸ್ವ ಪಾವತಿಸಿ ಮರುಳು ವ್ಯಾಪಾರ ನಡೆಸುತ್ತಿರುವ ಗುತ್ತಿಗೆದಾರರಿಗೆ ತೊಂದರೆ ನೀಡದೆ ಸಹಕಾರ ನೀಡಬೇಕು ಎಂದು ದ.ಕ.ಜಿಲ್ಲಾ ನಾನ್ ಸಿಆರ್‌ಝಡ್ ಮರುಳುಗಾರಿಕೆ ಮಾರಾಟ ಗುತ್ತಿಗೆದಾರರ ಸಂಘದ ಅಧ್ಯಕ್ಷ ದಿನೇಶ್ ಮೆದು ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ ಅವರು ಆಗ್ರಹಿಸಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಝೆಡ್ ಮರಳುಗಾರಿಕೆ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮರಳು ಸಮಸ್ಯೆ ಇದೆ ಎಂದು ಕಳೆದ ಕೆಲ ದಿನಗಳಿಂದ ಪ್ರಚಾರವಾಗುತ್ತಿದೆ.ಆದರೆ ಜಿಲ್ಲೆಯಲ್ಲಿ ಮರಳು ಸಮಸ್ಯೆ ಇಲ್ಲ. ಬೇಕಾದಷ್ಟು ಮರಳು ದಾಸ್ತಾನಿದೆ. 1ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಮರಳು ಈಗಾಗಲೇ ದಾಸ್ತಾನಿದೆ ಎಂದರು.
ಟೆಂಡರ್ ಮೂಲಕ ಕಾನೂನು ಬದ್ಧವಾಗಿ ಗುತ್ತಿಗೆ ಪಡೆದುಕೊಂಡಿರುವರು ಮಾರ್ಚ್ 31ರೊಳಗೆ ನಿಗದಿಪಡಿಸಿದ ಉತ್ಪಾದನೆಯಲ್ಲಿ ಶೇ5೦ರಷ್ಟರ ರಾಜಸ್ವವನ್ನು ಸರ್ಕಾರಕ್ಕೆ ಕಟ್ಟಬೇಕಾಗಿದೆ. ಗುರಿ ತಲುಪದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಆದರೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ನಮ್ಮ ವಲಯಕ್ಕೆ ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಿದ್ದು,ಈ ಗುರಿ ತಲುಪಲು ಕೂಡ ಸಾಧ್ಯವಾಗುತ್ತಿಲ್ಲ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದ ಸರ್ಕಾರಕ್ಕೆ ಸಲ್ಲಬೇಕಾದ ರಾಜಸ್ವ ಸೋರಿಕೆಯಾಗಿ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ ಎಂದರು.