DAKSHINA KANNADA
ನದಿ ನುಂಗಿ ಅಕ್ರಮ ಕಟ್ಟಡ ನಿರ್ಮಾಣ, ಸ್ಥಳದ ಸರ್ವೆಗೆ ಪುತ್ತೂರು ತಹಶೀಲ್ದಾರ್ ಸೂಚನೆ….
ಪುತ್ತೂರು ಅಗಸ್ಟ್ 14: ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಕಬಳಿಸಿ ಕಟ್ಟಿರುವ ಕಟ್ಟಡದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಅಕ್ರಮ ಗೂಡಂಗಡಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ ನಂತರ ಇದೀಗ ಸಾರ್ವಜನಿಕರು ಈ ಅಕ್ರಮ ಕಟ್ಟದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಪುತ್ತೂರು ತಹಶೀಲ್ದಾರ್ ಕಟ್ಟಡದ ಎಲ್ಲಾ ಸ್ಥಳವನ್ನೂ ಸರ್ವೇ ನಡೆಸಬೇಕು ಎಂದು ತಾಲೂಕು ಸರ್ವೇ ಕಛೇರಿಗೆ ಪತ್ರ ಬರೆದಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕೂಟೇಲು ಸೇತುವೆ ಬಳಿ ನಿರ್ಮಾಣಗೊಂಡಿರುವ ಕಟ್ಟಡ ಪಕ್ಕದಲ್ಲೇ ಹರಿಯುತ್ತಿರುವ ನೇತ್ರಾವತಿ ನದಿಯನ್ನು ಕಬಳಿಸಿದೆ ಎನ್ನುವ ಆರೋಪ ಸಾರ್ವಜನಿಕರಿಂದ ನಿರಂತರವಾಗಿ ಕೇಳಿ ಬಂದಿತ್ತು. ಸುದ್ದಿ ಮಾಧ್ಯಮಗಳು ನಿರಂತರವಾಗಿ ಈ ಅಕ್ರಮ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿತ್ತು, ಅಲ್ಲದೆ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್, ಪುತ್ತೂರು ಸಹಾಯಕ ಆಯುಕ್ತರು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳ ಗಮನಕ್ಕೂ ಈ ವಿಚಾರವನ್ನು ತರಲಾಗಿತ್ತು.
ಆದರೆ ನಿರಂತರ ರಾಜಕೀಯ ಒತ್ತಡದ ಕಾರಣದಿಂದಾಗಿ ಈ ಕಟ್ಟಡದ ವಿರುದ್ಧ ಯಾವುದೇ ಕಾರ್ಯಾಚರಣೆಗೆ ಅಧಿಕಾರಿಗಳು ಈವರೆಗೂ ಮುಂದಾಗಿಲ್ಲ. ಆದರೆ ಉಪ್ಪಿನಂಗಡಿ ಗ್ರಾಮಪಂಚಾಯತ್ ಇತ್ತೀಚೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಿದ ಬಳಿಕ ಈ ಕಟ್ಟಡದ ವಿಚಾರ ಮತ್ತೆ ಬೆಳಕಿಗೆ ಬಂದಿದೆ.
ನದಿ ಪರಂಬೋಕು ಜಾಗವನ್ನು ಒತ್ತುವರಿ ಮಾಡಿ ಕಟ್ಟಿದ ಕಟ್ಟಡವನ್ನು ತೆರವು ಮಾಡಬೇಕು ಎನ್ನುವ ಒತ್ತಡ ಸಾರ್ವಜನಿಕ ವಲಯದಿಂದ ಮತ್ತೆ ಕೇಳಿ ಬರಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಪುತ್ತೂರು ತಹಶೀಲ್ದಾರ್ ಕಟ್ಟಡಕ್ಕೆ ಸಂಬಂಧಿಸಿದಂತೆ ಸ್ಥಳದ ಸರ್ವೇ ನಡೆಸುವಂತೆ ತಾಲೂಕು ಸರ್ವೇ ಕಛೇರಿಗೆ ಪತ್ರ ಬರೆದಿದ್ದಾರೆ.
ನದಿ ಪಾತ್ರದಲ್ಲಿ ಇದ್ದ ಕೇವಲ 50 ಸೆಂಟ್ಸ್ ಪಟ್ಟಾ ಜಮೀನಿನಲ್ಲಿ ಕಟ್ಟಡ ಕಟ್ಟಲು ಆರಂಭಿಸಿದ್ದ ಕಟ್ಟಡ ಮಾಲಿಕ ಬಳಿಕ ಪಕ್ಕದಲ್ಲೇ ಹರಿಯುವ ನೇತ್ರಾವತಿ ನದಿಯ ಪರಂಬೋಕು ಜಾಗವನ್ನೂ ಗುಳುಂ ಮಾಡಿದ್ದಾನೆ. ಕಟ್ಟಡದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಅಂದಿನ ಸಹಾಯಕ ಆಯುಕ್ತರಾಗಿದ್ದ, ಹಾಗೂ ಇದೀಗ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ನದಿ ಪರಂಬೋಕು ಅತಿಕ್ರಮಿಸಿ ಕಟ್ಟಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.
ಆದರೆ ಆ ಬಳಿಕ ಬಂದ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಟ್ಟಡ ಮತ್ತೆ ಬೃಹದಾಕಾರವಾಗಿ ನಿರ್ಮಾಣಗೊಂಡಿದೆ.