KARNATAKA
ಜನಾರ್ಧನ ರೆಡ್ಡಿಗೆ ಶಾಕ್ ಕೊಟ್ಟ ಸಿಬಿಐ ಕೋರ್ಟ್ – ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ 7 ವರ್ಷ ಜೈಲು

ಹೊಸದಿಲ್ಲಿ ಮೇ 06: ಅಕ್ರಮ ಗಣಿಗಾರಿಕೆ ಕೇಸ್‌ಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ದೆಹಲಿ ಸಿಬಿಐ ನ್ಯಾಯಾಲಯ ಶಾಕ್ ಕೊಟ್ಟಿದ್ದು, ಪ್ರಕರಣದಲ್ಲಿ ಜನಾರ್ಧ ರೆಡ್ಡಿ ಅಪರಾಧಿ ಎಂದು ದೆಹಲಿ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈ ಆದೇಶ ಬಂದಿದೆ. ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣೆ ನಡೆದಿತ್ತು. ಮೂರು ಸಾವಿರಕ್ಕೂ ಅಧಿಕ ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಮಾಜಿ ಸಚಿವ ಮತ್ತು ಹಾಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ 8 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 420, 409, 468 ಮತ್ತು 471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಜನಾರ್ಧನ ರೆಡ್ಡಿ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅವರನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ, ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆ ಹಿನ್ನಲೆ ಜನಾರ್ಧನ ರೆಡ್ಡಿ ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.