KARNATAKA
ನ್ಯಾಯಾಲದ ಆದೇಶವಿದ್ದರೂ ಒಂದರ ನಂತರ ಮತ್ತೊಂದು ಯೂಟ್ಯೂಬ್ ಚಾನಲ್ ಆರಂಭಿಸುತ್ತಿರುವುದೇಕೆ – ಹೈಕೋರ್ಟ್ ಪ್ರಶ್ನೆ

ಬೆಂಗಳೂರು ಜುಲೈ 30: ಧರ್ಮಸ್ಥಳ ಹಾಗೂ ತಮ್ಮ ಕುಟುಂಬದ ವಿರುದ್ದ ಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಹಾಗೂ ಇದೀಗ ಮಾಡಿರುವ ಎಲ್ಲಾ ವರದಿಗಳನ್ನು ಡಿಲೀಟ್ ಮಾಡಲು ಸೆಶನ್ಸ್ ನ್ಯಾಯಾಲಯದಿಂದ ಆದೇಶದ ವಿರುದ್ದ ಹೈಕೋರ್ಟ್ ನಲ್ಲಿ ಯುಟ್ಯೂಬರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ.
ಪೀಠವು ಅರ್ಜಿದಾರರನ್ನು ಕುರಿತು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವುದೇಕೆ? ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ. ಪ್ರತಿಬಂಧಕಾದೇಶ ಮಾಡಿದ ಮೇಲೂ ಒಂದರ ನಂತರ ಮತ್ತೊಂದು (ಯೂಟ್ಯೂಬ್) ಚಾನಲ್ ಆರಂಭಿಸುತ್ತಿರುವುದೇಕೆ ಎಂದು ಪ್ರಶ್ನಿಸಿತು.

ಧರ್ಮಸ್ಥಳ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಸಂವಿಧಾನದ 21ನೇ ವಿಧಿಯ ಇನ್ನೊಂದು ಮುಖ ಘನತೆಯ ಹಕ್ಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿಯೇ ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳನ್ನು ನಿರ್ಬಂಧಿಸಿ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದೆ. ಮಾನಹಾನಿಯೂ ಸಾವಿಗಿಂತಲೂ ಕನಿಷ್ಠ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ವಾದಿಸಲು ತಾವು ಸಿದ್ದವಾಗಿದ್ದೇವೆ. ಯಾವುದೇ ರೀತಿಯಲ್ಲಿ ಸಮಯ ಕೇಳುವುದಿಲ್ಲ” ಎಂದರು.
ದಕ್ಷಿಣ ಕನ್ನಡದ ಕುಡ್ಲ ರ‍್ಯಾಂಪೇಜ್ ಪ್ರಧಾನ ಸಂಪಾದಕ ಅಜಯ್ ಅವರನ್ನು ಪ್ರತಿನಿಧಿಸಿದ್ದ ವಕೀಲ ಎ ವೇಲನ್ ಅವರು “ವಿಚಾರಣಾಧೀನ ನ್ಯಾಯಾಲಯದ ಪ್ರತಿಬಂಧಕಾದೇಶವು ವ್ಯಾಪ್ತಿ ಮೀರಿದ್ದು, ಅದು ನಿಲ್ಲುವುದಿಲ್ಲ. ನಿರಂತರವಾಗಿ ಹರ್ಷೇಂದ್ರ ಕುಮಾರ್ ಅವರು ಎಷ್ಟು ಪ್ರತಿಬಂಧಕಾದೇಶ ಪಡೆದುಕೊಂಡಿದ್ದಾರೆ ಎಂಬುದನ್ನು ಹೇಳಬೇಕು. ಮಾನಹಾನಿಯ ಅಂಶಗಳನ್ನು ಪರಿಶೀಲಿಸದೇ ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳನ್ನು ನಿರ್ಬಂಧಿಸಿದೆ. 9,000 ಲಿಂಕ್‌ಗಳನ್ನು ಮೂರು ತಾಸಿನಲ್ಲಿ ಪರಿಶೀಲಿಸಿ ಪ್ರತಿಬಂಧಕಾದೇಶ ಮಾಡಲಾಗುತ್ತದೆಯೇ? ಆ ವಿಡಿಯೊಗಳಲ್ಲಿ ಮಾನಹಾನಿಯಾಗುವಂಥ ಯಾವುದೇ ಅಂಶಗಳಿಲ್ಲ. ಇಂಥ ನಿರ್ಬಂಧ ಆದೇಶಗಳನ್ನು ಮಾಡಿದರೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳಿಗೆ ಅಡಿಗಲ್ಲಾಗಿರುವ ತನಿಖಾ ಪತ್ರಿಕೋದ್ಯಮದ ಪ್ರಶ್ನೆ ಏನಾಗಬೇಕು? ಮಾಧ್ಯಮಗಳ ವರದಿಯನ್ನೇ ಆಧರಿಸಿ ರಾಜ್ಯ ಸರ್ಕಾರವು ಧರ್ಮಸ್ಥಳದಲ್ಲಿ ಕೊಲೆ ಮಾಡಿರುವ ಹೂತಿರುವ ಶವಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ” ಎಂದರು.