FILM
ಮುಂದಿನ ಜನ್ಮ ಇದ್ದರೆ ದೈವದ ಚಾಕರಿ ಮಾಡುವೆ – ರಿಷಬ್ ಶೆಟ್ಟಿ

ಉಡುಪಿ ಅಗಸ್ಟ್ 04: ಮುಂದಿನ ಜನ್ಮ ಇದ್ದರೆ ಅದರಲ್ಲಿ ಪಾಣಾರ ಸಮಾಜದಲ್ಲಿ ಹುಟ್ಟಿ ದೈವದ ಚಾಕರಿ ಮಾಡುವೆ ಎಂದು ಡಿವೈನ್ ಸ್ಟಾರ್, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಉಡುಪಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಜಿಲ್ಲಾ ಪಾಣರ ಸಂಘದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಾಂತಾರ ಸಿನಿಮಾ ಚಿತ್ರೀಕರಣ ಸಂದರ್ಭ ದೈವ ನರ್ತಕ್ಕೆ ಅಪಮಾನವಾಗದಂತೆ ಪಾಣಾರ ಸಮುದಾಯದ ದೈವ ನರ್ತಕರು ತಿಳಿ ಹೇಳಿದ್ದಾರೆ. ಪ್ರತಿ ಹಂತದಲ್ಲೂ ತಿದ್ದಿದ್ದಾರೆ.

ಕಾಂತಾರ ಸಿನಿಮಾ ಮೂಲಕ ದೈವಗಳ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನಿಮ್ಮ ಸಮುದಾಯದವನೇ ಎಂಬ ಭಾವ ಮೂಡಿದೆ ಎಂದು ರಿಷಬ್ ಶೆಟ್ಟಿ ಹೇಳಿದರು.
‘ದೈವ ನಂಬಿದವರನ್ನು ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆ. ಕಾಂತಾರ ಸಿನಿಮಾ ಗೆಲುವಿನಲ್ಲಿ ದೈವಗಳ ಪ್ರೇರಣೆ ಇದ್ದು, ಪಂಜುರ್ಲಿ, ಗುಳಿಗ, ಅಣ್ಣಪ್ಪ ಸ್ವಾಮಿ ದೈವಗಳ ಆಶೀರ್ವಾದ ಇದೆ ಎಂದರು.
ಕರಾವಳಿಯಲ್ಲಿ ದೇವಸ್ಥಾನಗಳು ನಿರ್ಮಾಣವಾಗುವ ಮೊದಲು ದೈವಾರಾಧನೆ ಅಸ್ತಿತ್ವದಲ್ಲಿತ್ತು. ಪ್ರಕೃತಿಯನ್ನು ಪೂಜಿಸಲಾಗುತ್ತಿತ್ತು.
ಪಾಣಾರ ಸಮುದಾಯ ದೈವ ನರ್ತಕರಾಗಿ, ದೈವ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಚಾರ. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ; ಪಾಣಾರ ಸಮುದಾಯಕ್ಕೆ ದೈವ ನರ್ತನ ಕಲೆ ಸಿದ್ಧಿಸಿದೆ ಎಂದರು.