LATEST NEWS
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ಯೋಜನೆ ರದ್ದು : ಹೆಚ್.ಡಿ.ಕುಮಾರ ಸ್ವಾಮಿ
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ಯೋಜನೆ ರದ್ದು : ಹೆಚ್.ಡಿ.ಕುಮಾರ ಸ್ವಾಮಿ
ಮಂಗಳೂರು, ಡಿಸೆಂಬರ್ 28 : ಪಶ್ಚಿಮ ಘಟ್ಟದಿಂದ ಬಯಲು ಪ್ರದೇಶಕ್ಕೆ ಕುಡಿಯುವ ನೀರು ಕೊಂಡುಹೋಗುವ ಬಹು ನಿರೀಕ್ಷಿತ ಎತ್ತಿನ ಹೊಳೆ ಯೋಜನೆಯನ್ನು ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ ಎತ್ತಿನಹೊಳೆ ಯೋಜನೆಯಲ್ಲಿನ ಅವ್ಯವಹಾರ ಕಣ್ಣಿಗೆ ಕಟ್ಟಿದಂತಿದೆ. ಈ ಅವ್ಯವಹಾರದ ತನಿಖೆ ಸರಿಯಾಗಿ ನಡೆದರೆ ಈ ಯೋಜನೆಯಲ್ಲಿ ಪಾಲು ಪಡೆದ ಬಹಳಷ್ಟು ಮಂದಿ ಜೈಲಿಗೆ ಹೋಗಲಿದ್ದಾರೆ ಎಂದರು. ಕುಡಿಯುವ ನೀರಿನ ಸಮಸ್ಯೆ ಇರುವ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಬೇಕು ಇದರಲ್ಲಿ ಎರಡು ಮಾತಿಲ್ಲ ಹಾಗೆಂದು ಯೋಜನೆ ಹೆಸರಲ್ಲಿ ಜನರನ್ನು ಮೋಸ ಮಾಡಬಾರದು ಎಂದು ಹೇಳಿದ ಅವರು ದುಡ್ಡು ಹೊಡಿಯೋಕೆ ಯೋಜನೆ ಮಾಡುವುದು ತಪ್ಪು ಎಂದರು.
ಮಹದಾಯಿ ನೀರಿನ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರ ಸ್ವಾಮಿ ಮಹದಾಯಿ ನೀರಿನ ವಿಚಾರ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ದೇವೇಗೌಡರು ಎರಡು ಬಾರಿ ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ. ಆದರೆ ರಾಜ್ಯದಲ್ಲಿರುವ 17 ಜನ ಸಂಸತ್ ಸದಸ್ಯರಿಗೆ ಪ್ರಧಾನಿಯನ್ನು ಒಪ್ಪಿಸಲು ಧೈರ್ಯ ಇಲ್ಲ ಎಂದರು. ಪ್ರಧಾನಿ ಅವರು ಮಹದಾಯಿ ನದಿ ನೀರು ವಿಚಾರ ಸಂಬಂಧಿಸಿದಂತೆ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಸಮಸ್ಯೆ ಬಗೆಹರಿಸಲಿ. ಈ ವಿಚಾರಲ್ಲಿ ಒಂದೋ ಗೋವಾ ಆಸೆ ಬಿಡಲಿ ಇಲ್ಲವೇ ಕರ್ನಾಟಕ ಆಸೆ ಬಿಡಬೇಕು ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.