KARNATAKA
ಡಿಕೆ ಶಿವಕುಮಾರ್ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಕ್ಕಾ: ಸಿ.ಟಿ ರವಿ ವ್ಯಂಗ್ಯ
ಚಿಕ್ಕಮಗಳೂರು, ಅಕ್ಟೋಬರ್ 02: ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಒಳಗಡೆ ಇಂತಹ ಕಲಾವಿದ ಇದ್ದನೆಂದು ನಾನು ಅಂದುಕೊಂಡಿರಲಿಲ್ಲ. ಅವರ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು ಎಂದು ಭಾರತ್ ಜೋಡೋ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ ಕಣ್ಣೀರಿಗೆ ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ. ಬಣ್ಣ ಹಾಕದೇ, ಗ್ಲಿಸರಿನ್ ಹಾಕದೇ ಕಣ್ಣೀರು ಹಾಕುವ ನಟನೆ ಅವರಿಗೆ ಒಲಿದು ಬಂದಿದೆ. ನಟನೆ ಡಿ.ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದು ಬಿಟ್ಟಿದ್ದಾರೆ. ಆದರೆ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ ಪ್ರಯತ್ನಪಟ್ಟರೆ ಪೋಷಕ ಪಾತ್ರಗಳು ಸಿಗುತ್ತದೆ.
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಕಾಂಪಿಟೇಟರ್ ಹುಟ್ಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಅವಕಾಶ ಸಿಗದಂತೆ ಡಿ.ಕೆ. ಶಿವಕುಮಾರ ನಟನೆ ಮಾಡಿದ್ದಾರೆ. ಇನ್ನು ಮುಂದೆ ಪ್ರಶಸ್ತಿ ಏನಿದ್ರೂ ಅವರ ಪಾಲಿಗೆ. ಲೇಟಾಗಿದೆ, ಆದರೆ ಕೂಡ ಕಡೆ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿಕೆ ಶಿವಕುಮಾರ್ ಟ್ರೈ ಮಾಡೋದು ಒಳ್ಳೆಯದು ಎಂದು ಸಿಟಿ ರವಿ ವ್ಯಂಗ್ಯವಾಡಿದರು.
ಭಾರತವನ್ನು ತುಂಡು ಮಾಡುವಾಗ ಸಹಿ ಹಾಕಿದ್ದು ಕಾಂಗ್ರೆಸ್. ಕೋಟ್ಯಂತರ ಜೀವವನ್ನು ಮತಾಂಧರ ಕೈಗೆ ಕೊಟ್ಟು ಬಂದರು. ವಿಭಜಿತ ಭಾರತವನ್ನು ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಅಂತಾ ಕಾಂಗ್ರೆಸ್ಗೆ ಅನ್ನಿಸ್ತಾ? ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರಿಸಲಿ. ಕಾಂಗ್ರೆಸ್ ಪಕ್ಷಕ್ಕೆ ನೀತಿ, ನಿಯತ್ತು, ನೇತೃತ್ವ ಯಾವುದೂ ಇಲ್ಲ ಎಂದು ವಾಗ್ದಾಳಿ ಮಾಡಿದರು.