DAKSHINA KANNADA
ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ;ಅಶ್ವಿನ್ ಕುಮಾರ್ ರೈ

ಮಂಗಳೂರು : ಭ್ರಷ್ಟಾಚಾರ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೇರಿದ ನರೇಂದ್ರ ಮೋದಿ ಕಳೆದ 10 ವರ್ಷದಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಾರ್ ರೂಂ ಮತ್ತು ಕಮ್ಯುನಿಕೇಶನ್ ಸೆಂಟರ್‌ನ ಉಸ್ತುವಾರಿ ಅಶ್ವಿನ್ ಕುಮಾರ್ ರೈ ಆರೋಪಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಇಡಿ, ಐಟಿ, ಸಿಬಿಐ ಮೂಲಕ ದಾಳಿ ನಡೆಸಿ ಹತ್ತಿಕ್ಕುವ ಪ್ರಯತ್ನ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸದ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿ ಧಕ್ಕೆ ತಂದಿದ್ದಾರೆ. ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಜನರಿಂದ ಆರಿಸಲ್ಪಟ್ಟ ರಾಜ್ಯದ ಮುಖ್ಯಮಂತ್ರಿಗಳನ್ನೇ ಬಂಧಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಒಂದೇ ಚುನಾವಣೆ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಅಪಚಾರ ಎಸಗುತ್ತಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ ಎಂದ ಅವರು ಭ್ರಷ್ಟಾಚಾರದ ಆರೋಪದ ಮೇರೆಗೆ ಇಡಿ, ಐಟಿ ದಾಳಿಗೊಳಗಾದವರು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಪರಿಶುದ್ಧರಾಗುತ್ತಾರೆ. ಭಾವನಾತ್ಮಕ ವಿಚಾರಗಳನ್ನು ಕೆದಕಿ ಮತದಾರರನ್ನು ವಂಚಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನವೀನ್ ಡಿಸೋಜ, ಶುಭೋದಯ ಆಳ್ವ, ಮೊಹಮ್ಮದ್ ವಳವೂರ್, ನೀರಜ್ ಪಾಲ್, ಟಿ.ಕೆ.ಸುಧೀರ್, ಶಬ್ಬೀರ್.ಎಸ್, ಮೊಹಶೀರ್ ಸಾಮಣಿಗೆ, ದುರ್ಗ ಪ್ರಸಾದ್ ಮತ್ತಿತರರು ಇದ್ದರು.
