DAKSHINA KANNADA
ಮಂಡೆಕೋಲು ಮುರೂರಿನಲ್ಲಿ ವಿನಾಶದ ಅಂಚಿನಲ್ಲಿರುವ ಇಡ್ತಲೆ ಹಾವಿನ ಕಳ್ಳಸಾಗಾಟ- ಐವರ ಬಂಧನ
ಸುಳ್ಯ, ಮೇ 04: ಕೇರಳದ ಕಾಸರಗೋಡಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇಡ್ತಲೆ ಹಾವು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಐವರು ಕೇರಳ ಮೂಲದವರನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದನ್ನು ಗಮನಿಸಿದ ಪೋಲೀಸರ ತಂಡ ಅವರನ್ನು ಚೇಸ್ ಮಾಡಿ ನಿಲ್ಲಿಸಿ ಪರಿಶೀಲಿಸಿದ ಸಂದರ್ಭ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಕಾರಿನಲ್ಲಿದ್ದ ಐವರನ್ನು ಪೋಲೀಸರು ವಶಕ್ಕೆ ಪಡೆದು ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮೆಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಪೋಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳಾದ ಎಸ್.ಐ.ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್ , ಸಂತೋಷ್, ಸರಸ್ವತಿ ಯವರು ಕಾರ್ಯಾಚರಣೆಯಲ್ಲಿದ್ದರು.