KARNATAKA
ವೈರಲ್ ಆಗಿರುವ ವಾಟ್ಸಾಪ್ ಚಾಟ್ ಸುಳ್ಳು – ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ

ಕಲಬುರಗಿ: ಐಎಎಸ್ ಅಧಿಕಾರಿ ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವಿರುದ್ಧ ಯುವತಿಯೊಬ್ಬಳು ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಕಲಬುರಗಿ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಟ್ವಿಟರ್ ನಲ್ಲಿ ದೂರು ಪ್ರತಿಯನ್ನು ಲಗತ್ತಿಸಿರುವ ಯುವತಿ ಅದನ್ನು ಸಿಎಂ ಹಾಗೂ ಪ್ರಧಾನ ಮಂತ್ರಿಗಳಿಗೂ ಕಳುಹಿಸಿದ್ದಾರೆ. ಸದ್ಯ ಯುವತಿಯ ಪತ್ರ ಹಾಗೂ ವಾಟ್ಸಪ್ ಚಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಅಧಿಕೃತ ಟ್ವಿಟರ್‍ನಲ್ಲಿ ಹ್ಯಾಶ್ ಟ್ಯಾಗ್ ಮಾಡಿರುವ ಈಕೆ, ನನಗೆ ಐಎಎಸ್ ಅಧಿಕಾರಿಯಿಂದ ಅನ್ಯಾಯವಾಗಿದ್ದು, ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸ್ನೇಹಲ್ ಲೋಖಂಡೆ ಅವರು ಪರಿಚಯವಾಗಿದ್ದು, ನಂತರ ಅದು ಸ್ನೇಹಕ್ಕೆ ತಿರುಗಿ ಸಂಬಂಧದವರೆಗೆ ತಲುಪಿತ್ತು. ತಮ್ಮ ಜೊತೆ ಹೊಟೇಲ್‍ಗಳಲ್ಲಿ ಅಧಿಕಾರಿ ಕಾಲ ಕಳೆದಿದ್ದಲ್ಲದೆ ಸಾಕಷ್ಟು ಬಾರಿ ನಾವಿಬ್ಬರೂ ಹೊರಗೆ ಹೋಗಿ ಸಮಯ ಕಳೆದಿದ್ದೇವೆ. ಈ ಮಧ್ಯೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಲೋಖಂಡೆ ಇದೀಗ ವಂಚಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಅದರೆ ಇದನ್ನು ಸಾರಾಸಗಾಟಾಗಿ ತಳ್ಳಿ ಹಾಕಿರುವ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಯುವತಿಯು ತಮ್ಮ ಆಧಾರರಹಿತ ಆರೋಪ ಮಾಡಿದ್ದು, ಹೈಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.