FILM
`I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಪ್ರಥಮ್

ಬೆಂಗಳೂರು, ಜುಲೈ 28: ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕಾನೂನು ಸಮರಕ್ಕಿಳಿಯಲು ಮುಂದಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ಒಳ್ಳೆ ಹುಡ್ಗ ಪ್ರಥಮ್ ಸಾಥ್ ನೀಡಲು ಮುಂದಾಗಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಹಂಚಿಕೊಂಡಿರುವ ಅವರು, ನಾನು ರಮ್ಯಾ ಮೇಡಂ ಘನತೆಗೆ ಬೆಂಬಲ ನೀಡುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ರಮ್ಯಾ ಅವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದರೂ ಜಾಣಕಿವುಡರಾಗಿರುವ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರು ಕಾಲ ಬಾಳುವ ಆಯಸ್ಸು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ.
ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ್ದವರ ಅಕೌಂಟ್‌ಗಳನ್ನು ಬಹಿರಂಗೊಳಿಸಿದ್ದಾರೆ. ರೇಣುಕಾಸ್ವಾಮಿ ಕಳುಹಿಸಿದ ಸಂದೇಶಕ್ಕೂ, ಡಿಬಾಸ್ ಫ್ಯಾನ್ಸ್ ಕಳುಹಿಸುತ್ತಿರುವ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀ-ದ್ವೇಷಿ ಮನೋಭಾವದವರು. ಇಂತವರಿಂದಲೇ ಹೆಣ್ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಅಂತ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್ ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.