LATEST NEWS
ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ
ಕಾರ್ಕಳ ಜನವರಿ 04: ನಾರಾಯಣ ಗುರುಗಳನ್ನು ಅವಮಾನಿಸುವ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶಾಸಕ ವಿ. ಸುನೀಲ್ ಕುಮಾರ್, ಸನಾತನ ಧರ್ಮವನ್ನು ದ್ವೇಷಿಸಬೇಕು ಎಂಬುದು ವಿಜಯನ್ ಅವರು ಶಿವಗಿರಿ ಸಮಾವೇಶದಲ್ಲಿನ ಭಾಷಣದ ತಿರುಳಾಗಿದೆ. ಅವರ ಹೇಳಿಕೆ ಹಿಂದೂಗಳನ್ನು ಘಾಸಿಗೊಳಿಸಿದೆ. ಅವರ ಮಾತುಗಳು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಹೇಳಿಕೆ ಮುಂದುವರಿದ ಭಾಗದಂತಿದೆ ಎಂದಿದ್ದಾರೆ.
ಹಿಂದೂಗಳ ಮೇಲೆ ನಿರಂತರ ದಾಳಿ, ದಬ್ಬಾಳಿಕೆ, ಕೊಲೆಯಂತಹ ಪೈಶಾಚಿಕ ಕೃತ್ಯ ನಡೆಸಿಕೊಂಡು ಹಿಂದೂಗಳ ಮೇಲಿನ ಅಕ್ರಮಣವನ್ನು ಪೋಷಿಸಿದ ಫ್ಯಾಸಿಸ್ಟ್ ಪಿಣರಾಯಿ ನೇತೃತ್ವದ ಕೇರಳ ಸರ್ಕಾರ ಇದೀಗ ಹಿಂದೂ ಧರ್ಮ ಪ್ರತಿಪಾದಕರನ್ನು ನಿಂದಿಸಿ, ಧರ್ಮದ ಅವಹೇಳನಕ್ಕೆ ಮುಂದಾಗಿದೆ. ಹಿಂದೂ ಸಮಾಜ ಸುಧಾರಕರ ವಿರುದ್ಧ ಕೇರಳ ಸರ್ಕಾರ ಮಾತನಾಡಲು ಆರಂಭಿಸಿದೆ. ಕೇರಳ ಸಿಎಂ ವಿರುದ್ಧ ಸಮಸ್ತ ಹಿಂದೂಗಳು ತರಾಟೆಗೆ ತೆಗೆದುಕೊಂಡು ಅವರ ವಿರುದ್ದ ಎದ್ದೇಳಬೇಕು ಎಂದು ಹೇಳಿದ್ದಾರೆ.
ಹಿಂದೂ ಧರ್ಮ ಪ್ರತಿಪಾದಕರ ಬಗ್ಗೆ ಬಾಲಿಶ: ಹೇಳಿಕೆ ನೀಡುವ ಪಿಣರಾಯಿ ವಿಜಯನ್ಗೆ ಅನ್ಯ ಧರ್ಮದ ಧರ್ಮಗುರುಗಳ ಬಗ್ಗೆ ಇಂತಹ ಮಾತುಗಳನ್ನು ಹೇಳಲು ಧೈರ್ಯವಿದೆಯೇ? ಈ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಯಲ್ಲಿ ಹಿಂದೂಗಳ ನಂಬಿಕೆಗೆ ಸವಾಲು ಹಾಕಲು ಪಿಣರಾಯಿ ಯತ್ನಿಸಿದ್ದರು. ಇದೀಗ ನಾರಾಯಣ ಗುರುಗಳು ಸನಾತನ ಧರ್ಮದ ವಕ್ತಾರರೂ ಅಲ್ಲ, ಸಾಧಕರೂ ಅಲ್ಲ ಎಂದು ಪುಣ್ಯಭೂಮಿ ಶಿವಗಿರಿಯಲ್ಲಿ ಹೇಳಿ ಸನಾತನ ಧರ್ಮ ಮತ್ತು ನಾರಾಯಣ ಗುರುಗಳ ಧಾರ್ಮಿಕ ಮೌಲ್ಯಗಳನ್ನು ತುಳಿಯುವ ನೀಚ, ಹೀನ ಕೃತ್ಯಕ್ಕೆ ಇಳಿದಿದೆ. ಇದು ಇಡೀ ಹಿಂದೂ ಸಮಾಜಕ್ಕೆ ಪಿಣರಾಯಿ ಮಾಡಿದ ಮಹಾದ್ರೋಹ ಎಂದು ಹರಿಹಾಯ್ದಿದ್ದಾರೆ.
1 Comment