ಚಿಕ್ಕಮಗಳೂರು, ಫೆಬ್ರವರಿ 23: ಕಾಫಿನಾಡಿನಲ್ಲಿ ಕೌಟುಂಬಿಕ ಕಲಹಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು 26 ವರ್ಷದ ಮನು ಎಂಬುವರು ಆತ್ಮ*ತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಬ್ಯಾಗದಹಳ್ಳಿ ಗ್ರಾಮದ ನಿವಾಸಿ ಮನು (26) ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಮನು ಅವರ ಸಾವಿಗೆ ಪತ್ನಿಯ ಮೇಲಿನ ಅಕ್ರಮ ಸಂಬಂಧದ ಶಂಕೆಯೇ ಕಾರಣ ಎನ್ನಲಾಗಿದೆ.
ಮನು ಅವರ ಪತ್ನಿಯ ಮೊಬೈಲ್ಗೆ ಪರಪುರುಷನಿಂದ ಮೆಸೇಜ್ಗಳು ಬರುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು. ಶನಿವಾರ ರಾತ್ರಿ ಕೂಡ ಪತ್ನಿ ಹಾಗೂ ಆಕೆಯ ಪ್ರಿಯಕರ ಎಂದು ಹೇಳಲಾದ ವ್ಯಕ್ತಿಯ ಜೊತೆ ಮನು ಜಗಳವಾಡಿದ್ದ. ಗಲಾಟೆ ಜೋರಾದಾಗ ಸ್ಥಳಕ್ಕೆ 112 ತುರ್ತು ವಾಹನದ ಪೊಲೀಸರು ಆಗಮಿಸಿ, ಇಬ್ಬರನ್ನೂ ಸಮಾಧಾನಪಡಿಸಿ ಹೋಗಿದ್ದರು.
ಪೊಲೀಸರು ರಾತ್ರಿ ಬುದ್ಧಿವಾದ ಹೇಳಿ ಹೋಗಿದ್ದರಾದರೂ, ಪತ್ನಿಯ ನಡವಳಿಕೆಯಿಂದ ತೀವ್ರವಾಗಿ ಮನನೊಂದಿದ್ದ ಮನು, ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.
ಪೋಷಕರ ಆರೋಪ
ನನ್ನ ಮಗನ ಸಾವಿಗೆ ಅವನ ಹೆಂಡತಿಯ ಅಕ್ರಮ ಸಂಬಂಧವೇ ಕಾರಣ, ಆಕೆಯ ಬಾಯ್ ಫ್ರೆಂಡ್ ಕಾಟ ತಾಳಲಾರದೆ ಮಗ ಈ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಮನು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಗನ ಬಲಿ ಪಡೆದವರಿಗೆ ಶಿಕ್ಷೆಯಾಗಬೇಕು, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.