DAKSHINA KANNADA
ಎತ್ತಿನಹೊಳೆ ಯೋಜನೆಗೆ ಭಾರಿ ಹಿನ್ನಡೆ: ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನಿರಾಕರಿಸಿದ ಕೇಂದ್ರ

ನವದೆಹಲಿ, ಜುಲೈ 8: ಹಾಸನ ಜಿಲ್ಲೆಯ ಸಕಲೇಶಪುರ ಪರಿಸರದಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಶಾಕ್ ನೀಡಿದೆ.
ಯೋಜನೆಗೆ ಅಗತ್ಯವಿದ್ದ ಹೆಚ್ಚುವರಿ 423 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನಿರಾಕರಿಸಿದೆ. ಇದರಿಂದ, ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಎದುರಾಗಿದೆ. ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ 432 ಎಕರೆ ಅರಣ್ಯ ಭೂಮಿಯನ್ನು ‘ಗುರುತ್ವಾಕರ್ಷಣೆ ಕಾಲುವೆ’ ನಿರ್ಮಾಣಕ್ಕೆ ಬಳಸುವ ನಿಟ್ಟಿನಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯ ಅಧೀನದಲ್ಲಿದ್ದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು.

ಜೂನ್ 26ರಂದು ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಹೆಚ್ಚುವರಿ ಅರಣ್ಯ ಭೂಮಿ ಬಳಕೆ ಪ್ರಸ್ತಾವನೆ ಕುರಿತು ಚರ್ಚೆಯಾಗಿತ್ತು. ಅಂತಿಮವಾಗಿ ಕೇಂದ್ರ ಅರಣ್ಯ ಇಲಾಖೆಯು ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡಿಲ್ಲ. ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಲಭ್ಯವಾಗುವ ಮೊದಲೇ ಅರಣ್ಯ ಭೂಮಿಯನ್ನು ಬಳಸಲಾಗಿದೆ ಎಂದು ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.
ಅನುಮೋದನೆ ಲಭ್ಯವಾಗುವ ಮೊದಲೇ ಅರಣ್ಯ ಭೂಮಿಯನ್ನು ಬಳಸಿ ಯೋಜನೆಯಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳು ಅರಣ್ಯ ನಿಯಮ ಉಲ್ಲಂಘಿಸಿರುವುದಾಗಿ ಸಮಿತಿಯು ವರದಿ ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಶಿಫಾರಸು ಮಾಡಿದೆ. ಜೊತೆಗೆ, ಲೋಪಗಳನ್ನು ಸರಿಪಡಿಸಿ ಸಮಜಾಯಿಷಿ ನೀಡಿದ ಬಳಿಕ ಮಾತ್ರ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಪರಿಗಣನೆಗೆ ಒಳಪಡಬಹುದೆಂದು ಸೂಚಿಸಿದೆ.
ಎತ್ತಿನಹೊಳೆ ಯೋಜನೆಗೆ 2016 ರಲ್ಲೇ 13.93 ಹೆಕ್ಟೇರ್ ಅರಣ್ಯ ಭೂಮಿ ಬಳಕೆಗೆ ಕೇಂದ್ರವು ಅನುಮೋದನೆ ನೀಡಿದ್ದು, 33 ಷರತ್ತುಗಳನ್ನು ವಿಧಿಸಿತ್ತು. ಆದರೆ ಬಹುತೇಕ ಷರತ್ತುಗಳನ್ನು ಈವರೆಗೆ ಪಾಲನೆ ಮಾಡಲಾಗಿಲ್ಲ. ಕಾಮಗಾರಿಯ ವೇಳೆ ಭೂಕುಸಿತ, ಮಣ್ಣಿನ ಕೊರೆತ, ಮನೆಗಳ ಹಾನಿ ಮುಂತಾದ ಪರಿಸರ ಭೀತಿಗಳು ಉಂಟಾಗಿದ್ದು, ಯಾವುದೇ ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬ ತೀವ್ರ ಆಕ್ಷೇಪಗಳನ್ನು ಎನ್‌ಜಿಟಿ ಮೇಲ್ವಿಚಾರಣಾ ತಂಡವು 2019ರ ವರದಿಯಲ್ಲಿ ಉಲ್ಲೇಖಿಸಿತ್ತು.
ಎತ್ತಿನಹೊಳೆ ನದಿಯಿಂದ ಸುಮಾರು 24 ಟಿಎಂಸಿ ನೀರನ್ನು ಬಯಲುಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು, ರಾಮನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳತ್ತ ಪೂರ್ವಾಭಿಮುಖವಾಗಿ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಯೋಜನೆಯ ಮೊದಲ ಹಂತದ ಕಾಮಗಾರಿ 2024ರ ಸೆಪ್ಟೆಂಬರ್ನಲ್ಲಿ ಸಕಲೇಶಪುರದಲ್ಲಿ ಉದ್ಘಾಟನೆಯಾಗಿತ್ತು.
1 Comment