DAKSHINA KANNADA
40 ವರ್ಷಗಳ ಸಾರ್ಥಕ ಸೇವೆ…ಕೊನೆಯದಿನ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಹೋಟೆಲ್ ನ್ಯೂ ಗಣೇಶ್ ಪ್ರಸಾದ್
ಪುತ್ತೂರು ಜೂನ್ 29: ಒಂದು ಕಾಲದಲ್ಲಿ ಪುತ್ತೂರಿನ ಮನೆಮಾತಾಗಿದ್ದು, ಪುತ್ತೂರಿನ ಎಲ್ಲಾ ಆಗುಹೋಗುಗಳ ಚರ್ಚೆಯ ಕೇಂದ್ರವಾಗಿದ್ದ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತನ್ನ ಸೇವೆಯನ್ನು ನಿಲ್ಲಿಸಿದೆ. ಈ ಮೂಲಕ 40 ವರ್ಷಗಳ ತನ್ನ ಸೇವೆಗೆ ಒಂದು ಪೂರ್ಣವಿರಾಮ ಇಟ್ಟಿದೆ. ನೂತನವಾಗಿ ಆರಂಭಗೊಳ್ಳುವ ಉದ್ಯಮದ ಸಂದರ್ಭದಲ್ಲಿ ಗ್ರಾಹಕರು,ಹಿತೈಷಿಗಳು ಬಂದು ಶುಭಾಶಯ, ಹಾರೈಕೆ ಮಾಡೋದು ಸಾಮಾನ್ಯ. ಆದರೆ ಇಲ್ಲೊಂದು ಉದ್ಯಮ ಮುಚ್ಚುವ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬಂದು ಆ ಉದ್ಯಮ ಮತ್ತು ತಮ್ಮ ಮಧ್ಯೆ ಇರುವ ಭಾವನಾತ್ಮಕ ಸಂಬಂಧವನ್ನು ತೋರ್ಪಡಿಸಿದ್ದಾರೆ.
ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಕುರಿತ ಕಥೆ. ಸುಮಾರು 40 ವರ್ಷಗಳ ಹಿಂದೆ ಈ ಹೋಟೆಲ್ ಪುತ್ತೂರಿನಲ್ಲಿ ಆರಂಬಗೊಂಡಿತ್ತು. ಆ ಬಳಿಕ ಪುತ್ತೂರು ನಗರ ಹಾಗು ಹೊರ ಭಾಗದಿಂದ ಬರುವ ಗ್ರಾಹಕರನ್ನು ಕುಟುಂಬ ಸದಸ್ಯರಂತೆ ಅತಿಥ್ಯ ನೀಡಿದ ಕಾರಣಕ್ಕಾಗಿ ಇದೀಗ ಮುಚ್ಚುವ ಸಂದರ್ಭದಲ್ಲಿ ಹೋಟೇಲ್ ಗೆ ಗ್ರಾಹಕರು ಬಂದು ತಮ್ಮ ಕೊನೆಯ ಇಷ್ಟದ ತಿಂಡಿಗಳನ್ನು ಸವಿದು ಹೋಗುತ್ತಿದ್ದಾರೆ. ತಿಂಡಿ-ತಿಸಿಸುಗಳಲ್ಲಿ ವೈರೈಟಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಿದ್ದ ಈ ಹೋಟೆಲ್ ಇನ್ನು ನೆನಪು ಮಾತ್ರ. ಹೋಟೆಲ್ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವನ್ನು ನೆಲಸಮ ಮಾಡಲು ಕಟ್ಟಡದ ಮಾಲಕರು ತೀರ್ಮಾನಿಸಿರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಹೋಟೆಲ್ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಜನಸಾಮಾನ್ಯನಿಂದ ಹಿಡಿದು ಜನಪ್ರತಿನಿಧಿಗಳು, ವೈದ್ಯರು, ವಕೀಲರು,ಪೋಲೀಸರು ಹೀಗೆ ಎಲ್ಲಾ ವರ್ಗದ ಜನ ಈ ಹೋಟೆಲ್ ನ ಡೈಲಿ ಕಸ್ಟಮರ್ಸ್ ಆಗಿದ್ದು, ಹೋಟೆಲ್ ಮುಚ್ಚುತ್ತಿರುವುದು ಎಲ್ಲರ ನಿರಾಶೆಗೆ ಕಾರಣವಾಗಿದೆ. ಕೇವಲ ವ್ಯವಹಾರದ ಕೇಂದ್ರವಾಗಿರದೆ, ಭಾವನಾತ್ಮಕ ನಂಟನ್ನೂ ಗ್ರಾಹಕ ಈ ಹೋಟೆಲ್ ಜೊತೆ ಇಟ್ಟುಕೊಂಡಿದ್ದಾನೆ. ಈ ಕಾರಣಕ್ಕಾಗಿ ಹೋಟೆಲ್ ನ ವ್ಯವಹಾರ ಜೂನ್ 28 ರ ಬಳಿಕ ಇರುವುದಿಲ್ಲ ಎಂದು ಮನಗಂಡು ದೂರದೂರುಗಳಿಂದ ಜನ ಇಲ್ಲಿ ಬಂದು ತಮ್ಮ ಫೇವರೇಟ್ ತಿಂಡಿಗಳನ್ನು ಕೊನೆಯ ಬಾರಿಗೆ ಸವಿಯುತ್ತಿದ್ದಾರೆ. ಪುತ್ತೂರಿನಲ್ಲಿ ರಾಜಕೀಯ ಸಂಘರ್ಷಗಳು ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಆರಂಭಗೊಂಡ ಈ ಹೋಟೆಲ್, ಪುತ್ತೂರಿನ ಎಲ್ಲಾ ಆಗುಹೋಗುಗಳ ಚರ್ಚೆ ನಡೆಯುತ್ತಿದ್ದ ಕೇಂದ್ರವೂ ಆಗಿತ್ತು..